×
Ad

ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ವಿಚಾರ: ಆಕ್ಷೇಪಣೆ ಸಲ್ಲಿಸಲು ಕೇಂದ್ರಕ್ಕೆ ಸಮಯಾವಕಾಶ ನೀಡಿದ ಹೈಕೋರ್ಟ್

Update: 2020-10-05 22:08 IST

ಬೆಂಗಳೂರು, ಅ.5: ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ವಿಚಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಮುಂದಿನ 10 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಗಡುವು ವಿಧಿಸಿದೆ.

ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಲಾಗಿದೆ ಎಂದು ಆಕ್ಷೇಪಿಸಿ ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕೇಂದ್ರದ ಪರ ವಕೀಲ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈಗಾಗಲೇ ವಿಳಂಬವಾಗಿದೆ. ಹೀಗಾಗಿ ಮುಂದಿನ 10 ದಿನಗಳಲ್ಲಿ ಕಾಲಾವಕಾಶ ನೀಡಬೇಕು. ಇದೇ ಕೊನೆಯ ಅವಕಾಶ, ಮತ್ತೆ ಹೆಚ್ಚುವರಿ ಸಮಯ ನೀಡುವುದಿಲ್ಲ ಎಂದು ನಿರ್ದೇಶಿಸಿ, ವಿಚಾರಣೆಯನ್ನು ಅ.19ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ: ಕೊರೋನ ಸೋಂಕು ನಿಯಂತ್ರಿಸಲು ಸಂಪರ್ಕಗಳನ್ನು ಪತ್ತೆ ಹಚ್ಚಲು ಆರೋಗ್ಯ ಸೇತು ಮೊಬೈಲ್ ಆ್ಯಪ್ ರೂಪಿಸಲಾಗಿದ್ದು, ಇದನ್ನು ಎಲ್ಲರೂ ಕಡ್ಡಾಯವಾಗಿ ಬಳಸುವಂತೆ ಕೇಂದ್ರ ಸೂಚಿಸಿದೆ. ಆದರೆ ಭಾರತದಲ್ಲಿ ಶೇ.35ರಷ್ಟು ವಯಸ್ಕ ಜನ ಮಾತ್ರ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಾರೆ. ಹೀಗಾಗಿ, ಆ್ಯಪ್ ಅನ್ನು ಎಲ್ಲರೂ ಬಳಸಲು ಸಾಧ್ಯವಿಲ್ಲ. ಮುಖ್ಯವಾಗಿ ಕೇಂದ್ರ ಸರಕಾರದ ಈ ನಿರ್ಧಾರ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ವಿರುದ್ಧವಾಗಿದೆ. ಹೀಗಾಗಿ ಕೇಂದ್ರದ ಆದೇಶ ರದ್ದುಗೊಳಿಸಬೇಕು ಮತ್ತು ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಐಚ್ಛಿಕಗೊಳಿಸಬೇಕೇ ವಿನಃ ಕಡ್ಡಾಯಗೊಳಿಸಬಾರದು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News