ಚಿಕ್ಕಮಗಳೂರು: ಹತ್ರಸ್ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಬಿಜೆಪಿ ಮನವಿ
ಚಿಕ್ಕಮಗಳೂರು, ಅ.5: ಉತ್ತರ ಪ್ರದೇಶ ರಾಜ್ಯದ ಹತ್ರಸ್ನಲ್ಲಿ ನಡೆದಿರುವ ದಲಿತ ಯುವತಿಯ ಅತ್ಯಾಚಾರವನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ಯುವತಿಯ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಮತ್ತು ಅತ್ಯಾಚಾರ ಹೆಣ್ಣು ಕುಲಕ್ಕೆ ಮಾಡಿದ ಘೋರ ಅಪಮಾನವಾಗಿದೆ. ಇಂತಹ ನೀಚ ಕೃತ್ಯವನ್ನು ಮಾಡಿರುವವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರು ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ನೇತೃತ್ವದ ಬಿಜೆಪಿ ಮುಖಂಡರ ತಂಡ ಜಿಲ್ಲಾಧಿಕಾರಿ ಮೂಲಕ ಯುಪಿ ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್‍ರಿಗೆ ಮನವಿ ಸಲ್ಲಿಸಿತು.
ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳಾದ ರಾಜೇಶ್ ಕಲ್ದೊಡ್ಡಿ, ಜಸಂತಾ ಅನಿಲ್ ಕುಮಾರ್, ವಿಶಾಖಾ, ಬಸವರಾಜ್, ಕೇಶವ ಹಿರೇಮಗಳೂರು ಮತ್ತಿತರರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ.ಬಗಾದಿ ಗೌತಮ್ ಮೂಲಕ ಉತ್ತರ ಪ್ರದೇಶ ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್‍ರಿಗೆ ಮನವಿ ಸಲ್ಲಿಸಿದರು.
ದೇಶದಾದ್ಯಂತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಎಷ್ಟೇ ಕಾನೂನುಗಳು ಬಂದರೂ ಮತ್ತೆ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ದುರಾದೃಷ್ಟಕರ. ಎಲ್ಲದಕ್ಕೂ ಕಠಿಣ ಕಾನೂನು ಇರುವ ಉತ್ತರ ಪ್ರದೇಶದ ಸರಕಾರದಲ್ಲಿ ಹತ್ರಸ್ ಅತ್ಯಾಚಾರ ಆರೋಪಿಗಳಿಗೆ ನೀಡುವ ಶಿಕ್ಷೆ ಇಡೀ ದೇಶಕ್ಕೆ ಮಾದರಿಯಾಗಬೇಕು. ಹತ್ರಸ್ನಲ್ಲಿ ದಲಿತ ಸಮುದಾಯದ ಯುವತಿ ಮೇಲೆ ಆರೋಪಿಗಳು ಪೈಶಾಚಿಕ ಕೃತ್ಯ ಎಸಗುವ ಮೂಲಕ ನಾಗರಿಕ ಸಾಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ಅತ್ಯಾಚಾರವೆಸಗಿರುವ ಆರೋಪಿಗಳ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಕ್ರಮ ಜರುಗಿಸಬೇಕು. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಳಂಬ ನೀತಿ ಅನುಸರಿಸಿರುವವರ ವಿರುದ್ಧವೂ ಸೂಕ್ತ ಕ್ರಮ ಜರಗಿಸಬೇಕೆಂದು ಮುಖಂಡರು ಮನವಿಯಲ್ಲಿ ಆಗ್ರಹಿಸಿದ್ದಾರೆ.