‘ವಿದ್ಯಾಗಮ’ ಕಲಿಕಾ ಕೇಂದ್ರದಿಂದ ದಲಿತ ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿದ ಶಿಕ್ಷಕರು: ಆರೋಪ
ಗುಂಡ್ಲುಪೇಟೆ,ಅ.5: ತಾಲೂಕಿನ ಸಮೀಪದ ಚಿಕ್ಕಾಟಿ ಗ್ರಾಮದಲ್ಲಿ ಸರಕಾರದಿಂದ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ‘ವಿದ್ಯಾಗಮ’ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿಗಳನ್ನು ಕಲಿಕಾ ಕೇಂದ್ರ ಕನಕ ಭವನದಿಂದ ಹೊರಗೆ ಕಳುಹಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಯುವ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಮೌರಿ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಚಿಕ್ಕಾಟಿ ಗ್ರಾಮದ ಕನಕ ಸಮುದಾಯ ಭವನದಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿದ್ದು ಗ್ರಾಮದ ಮುಖಂಡರೊಬ್ಬರು ದಲಿತ ವಿದ್ಯಾರ್ಥಿಗಳು ಭವನದ ಒಳಗೆ ಬರಬೇಡಿ ಮೆಟ್ಟಿಲ ಬಳಿ ಕುಳಿತು ಅಭ್ಯಾಸ ಮಾಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅದರಂತೆ ಶಿಕ್ಷಕರು ಸಹ ನಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಧರಣಿ ನಿರತರು ಶಾಲಾ ಶಿಕ್ಷಕರನ್ನು ಅಮಾನತು ಮಾಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಪ್ರಕರಣದ ಬಗ್ಗೆ ಬೇಗೂರು ಪೊಲೀಸ್ ಠಾಣೆ ಮತ್ತು ಗುಂಡ್ಲುಪೇಟೆಯ ತಹಶೀಲ್ದಾರ್ ನೇತೃತ್ವದಲ್ಲಿ ರಾಜೀ ಪಂಚಾಯಿತಿ ನಡೆದಿದ್ದು ಕನಕ ಸಮುದಾಯ ಭವನಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೀಗಾಗಿ ಚಿಕ್ಕಾಟಿ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಇಲ್ಲದಂತಾಗಿದೆ.
ಶಿಕ್ಷಕರಿಗೆ ನೋಟಿಸ್ ಜಾರಿ
ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಗಮ ಕಲಿಕಾ ಕೇಂದ್ರದಲ್ಲಿ ಅ.3 ರಂದು ಪರಿಶಿಷ್ಟ ಜಾತಿ ಮಕ್ಕಳನ್ನು ನಿಂದಿಸಿರುವ ಘಟನೆ ಸಂಬಂಧ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಗುಂಡ್ಲುಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿಯವರು ಘಟನೆಯ ದೂರಿನ ಸಂಬಂಧ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಘಟನೆ ಬಗ್ಗೆ ವಿಚಾರಣೆ ನಡೆಸಿದೆ. ಈ ಬಗ್ಗೆ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದ್ದು, ಈ ಬಗ್ಗೆ ಉತ್ತರ ಪಡೆದು ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸಂಬಂಧಿಸಿದ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಕರು ಇಲ್ಲದ ಸಂದರ್ಭ ಮುಖಂಡರೊಬ್ಬರು ಮಕ್ಕಳನ್ನು ಹೊರಗೆ ಇರುವಂತೆ ತಿಳಿಸಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭ ಶಿಕ್ಷಕರು ಇರಲಿಲ್ಲ ಎಂದು ತಿಳಿಸಿದ್ದು, ಈ ಬಗ್ಗೆ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
- ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ