​ಹತ್ರಸ್ ಪ್ರಕರಣ: ಪತ್ರಕರ್ತ, ರಾಜಕಾರಣಿ ವಿರುದ್ಧ ದೇಶದ್ರೋಹ ಕೇಸು !

Update: 2020-10-06 03:45 GMT

ಆಗ್ರಾ : ಹತ್ರಸ್ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಒಬ್ಬ ಪತ್ರಕರ್ತ, ಒಬ್ಬ ರಾಜಕಾರಣಿ ಸೇರಿದಂತೆ ಹಲವು ಮಂದಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಅಪರಾಧ ಪಿತೂರಿ ಮತ್ತು ದಂಗೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ಅವಧೇಶ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. "ಕೆಲ ಸಮಾಜಘಾತುಕ ಶಕ್ತಿಗಳು ಸರ್ಕಾರದ ವಿರುದ್ಧ ಪೂರ್ವಯೋಜಿತ ಪಿತೂರಿ ಮೂಲಕ ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ" ಎಂದು ಅವರು ಆಪಾದಿಸಿದ್ದರು.

ಸಂತ್ರಸ್ತೆಯ ಕುಟುಂಬದವರು ಸರ್ಕಾರದ ವಿರುದ್ಧ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುವಂತೆ ಒತ್ತಡ ತರಲಾಗಿತ್ತು ಹಾಗೂ ಇದಕ್ಕಾಗಿ ರಾಜಕೀಯ ಮುಖಂಡರೊಬ್ಬರು 50 ಲಕ್ಷ ರೂಪಾಯಿ ಕೊಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದರು.

"ಸರ್ಕಾರದ ಕ್ರಮದಿಂದ ನಮಗೆ ತೃಪ್ತಿ ಇಲ್ಲ ಎಂದು ಹೇಳಿಕೆ ನೀಡುವಂತೆ ಸಂತ್ರಸ್ತೆಯ ತಂದೆಯ ಮನವೊಲಿಸಲು ಪತ್ರಕರ್ತರೊಬ್ಬರು ಸಂತ್ರಸ್ತೆಯ ಸಹೋದರನಿಗೆ ಸೂಚಿಸಿದ್ದರು" ಎಂದು ದೂರಲಾಗಿದೆ. ವೈದ್ಯಕೀಯ ವರದಿಗಳು ಅತ್ಯಾಚಾರ ಸಾಧ್ಯತೆಯನ್ನು ಅಲ್ಲಗಳೆದಿದ್ದು, ಸತ್ಯಾಂಶವನ್ನು ತಿರುಚಲು ಕುಟುಂಬಕ್ಕೆ ಆಮಿಷ ಒಡ್ಡಲಾಗಿದೆ" ಎಂದು ಆಪಾದಿಸಲಾಗಿದೆ.

ಚಾಂದ್‌ಪ ಪೊಲೀಸ್ ಠಾಣೆಯಲ್ಲಿ ರವಿವಾರ ಎಫ್‌ಐಆರ್ ದಾಖಲಿಸಲಾಗಿದ್ದು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಸೇರಿದಂತೆ ಒಟ್ಟು 680 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144 ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ.

ಇದರ ಜತೆಗೆ ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಹತ್ರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಹೊರಿಸಿ 19 ಎಫ್‌ಐಆರ್ ದಾಖಲಾಗಿವೆ. ಈ ಪೈಕಿ 13 ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ದಾಖಲಾಗಿದ್ದು, ಶಾಂತಿ ಕದಡುವ ಉದ್ದೇಶದಿಂದ ಈ ಪೋಸ್ಟ್ ಮಾಡಲಾಗಿದೆ ಎಂದು ಆಪಾದಿಸಲಾಗಿದೆ. ಹತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣದ ವಿರುದ್ಧ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಈ ವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ರಾಜ್ಯದಲ್ಲಿ ಜಾತಿ ಮತ್ತು ಕೋಮು ವಿಭಜನೆಯನ್ನು ಹರಡುವ ಉದ್ದೇಶದಿಂದ ನಡೆದ ಅಂತರ್ ರಾಷ್ಟ್ರೀಯ ನೆರವಿನ ಪಿತೂರಿ ಇದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News