ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ ಸ್ಪರ್ಧೆ: ಸಿದ್ದರಾಮಯ್ಯ
ಮೈಸೂರು,ಅ.6: ರಾಜ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿ, ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಸ್ಪರ್ಧೆ ಮಾಡಲಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಮಂಗಳವಾರ ಮೈಸೂರಿಗೆ ಆಗಮಿಸಿದ ಅವರು ತಮ್ಮ ಟಿ.ಕೆ ಲೇಔಟ್ ನಿವಾಸದಲ್ಲಿ ಮಾಧ್ಯಮದವರೂಂದಿಗೆ ಮಾತನಾಡಿದರು.
ರಾಜರಾಜೇಶ್ವರಿನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಅವರ ಹೆಸರನ್ನು ಮಾತ್ರ ಹೈಕಮಾಂಡಿಗೆ ಕಳಿಸಲಾಗಿದ್ದು ಇಂದು ಸಂಜೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದರು.
ಕುಸುಮಾ ಅವರನ್ನು ಯಾರು ವಿರೋಧ ಮಾಡುತ್ತಾರೊ ಬಿಡುತ್ತಾರೊ ಗೊತ್ತಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿ ಅವರೇ ಆಗಿದ್ದು ಅವರ ಪರ ನಾವೆಲ್ಲರೂ ಕೆಲಸ ಮಾಡುವುದಾಗಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ತನಿಖೆ ನಡೆದರೆ ಅಭ್ಯಂತರವಿಲ್ಲ. ಆದರೆ ಈಗ ಅವರ ಮೇಲೆ ದಾಳಿ ನಡೆದಿರುವ ಸಂದರ್ಭ ಎಂತಹುದು ಎಂದು ಪ್ರಶ್ನಿಸಿದ ಅವರು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ದೂರಿದರು.
ಖಾವಿ ಬಟ್ಟೆ ತೊಡಲು ಆದಿತ್ಯನಾಥ ಯೋಗ್ಯರಲ್ಲ
ಉತ್ತರ ಪ್ರದೇಶದ ಹತ್ರಸ್‍ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನಾಲಾಯಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬಿಜೆಪಿ ನಾಯಕರು ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಯೋಗಿ ಆದಿತ್ಯನಾಥ್ ವಿರುದ್ಧ 27 ಪ್ರಕರಣಗಳು ದಾಖಲಾಗಿವೆ. ನಾಲ್ಕೈದು ಪ್ರಕರಗಣಗಳು ದಾಖಲಾದರೆ ರೌಡಿಶೀಟರ್ ಎನ್ನುತ್ತಾರೆ. ಈ ಕಾನೂನು ಅವರಿಗೆ ಮಾತ್ರ ಅನ್ವಯಿಸುವುದಿಲ್ಲ. ಯೋಗಿ ಆದಿತ್ಯನಾಥ ಕಾವಿ ಬಟ್ಟೆ ತೊಡಲು ಯೋಗ್ಯರಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದರು.
ಮೈಸೂರು ದಸರಾ ಪೂಜೆಗೆ ಸೀಮಿತಗೊಳಿಸಿ
ಮೈಸೂರು ದಸರಾವನ್ನು ಪೂಜೆಗೆ ಸೀಮಿತಗೊಳಿಸಬೇಕು. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ಮಾಡಿ ಅರಮನೆಯಲ್ಲಿ ಪೂಜೆ ಮಾಡಿದರೆ ಸಾಕು. ಸುಮ್ಮನೆ ಜನ ಸೇರಿಸಿ ಕೊರೋನ ಸೋಂಕು ಮತ್ತಷ್ಟು ಹೆಚ್ಚಲು ಕಾರಣರಾಗಬೇಡಿ. ಈಗಲೇ ಮೈಸೂರಿನಲ್ಲಿ ಕೊರೋನ ವೈರಸ್ ಸೋಂಕು ಹೆಚ್ಚಾಗಿದೆ. ದಸರಾ ಆಚರಿಸಿ ಅದಕ್ಕೆ ತುಪ್ಪು ಸುರಿಯಬೇಡಿ. ದಸರಾ ದೀಪಾಲಂಕಾರ ಮಾಡಿರುವುದು ಕೂಡಾ ತಪ್ಪು. ಜಂಬೂಸವಾರಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ? ಈ ರೀತಿಯ ಆಚರಣೆಗಳಿಂದ ಜನ ಸೇರುತ್ತಾರೆ. ಇದರಿಂದ ಕೊರೋನ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿದರು.