ಡಿಕೆಶಿ ಸತ್ಯಹರಿಶ್ಚಂದ್ರರೇನಲ್ಲ, ಅವರ ಆಸ್ತಿ ಈಗ ಎಷ್ಟಿದೆ ಎಂದು ಸ್ಪಷ್ಟಪಡಿಸಲಿ: ಕೇಂದ್ರ ಸಚಿವ ಜೋಶಿ

Update: 2020-10-06 12:18 GMT

ಬೆಳಗಾವಿ, ಅ, 6: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸತ್ಯಹರಿಶ್ಚಂದ್ರನ ಹಾಗೆ ಮಾತನಾಡುವುದನ್ನು ಬಿಟ್ಟು ರಾಜಕಾರಣಕ್ಕೆ ಬರುವ ಮುಂಚೆ ಅವರ ಆಸ್ತಿ ಎಷ್ಟಿತ್ತು, ಈಗ ಅದು ಎಷ್ಟಾಗಿದೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

ಮಂಗಳವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಮನೆ ಮೇಲಿನ ದಾಳಿಗೂ ಉಪಚುನಾವಣೆಗೂ ಯಾವುದೇ ಸಂಬಂಧಿವಿಲ್ಲ. ಸಿಬಿಐ ದಾಳಿ ನಡೆಸುವ ಮೊದಲೇ ಈ ಬಗ್ಗೆ ಎಲ್ಲವನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದೆ. ಏಕಾಏಕಿ ಯಾರೊಬ್ಬರ ಮೇಲೆಯೂ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ಮುಖಂಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಸಿಬಿಐ ದಾಳಿ ನಡೆಸಿದೆ ಎಂದ ಅವರು, ಡಿ.ಕೆ.ಶಿವಕುಮಾರ್ ಅವರ ಬಂಧನ ಸಾಧ್ಯತೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನೀವು ಸಿಬಿಐ ಅಧಿಕಾರಿಗಳನ್ನು ಕೇಳಬೇಕು. ಈ ಸಂಬಂಧ ಅಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂದರು.

ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡಿದ್ದ ಕೃಷಿ ಮಸೂದೆಯನ್ನು ಬಿಜೆಪಿ ಸರಕಾರ ಸಂಸತ್‍ನಲ್ಲಿ ಅಂಗೀಕರಿಸಿದೆ. ಆದರೆ, ಇದೀಗ ರೈತರನ್ನು ಕಾಂಗ್ರೆಸ್ ಅಪಪ್ರಚಾರ ಮಾಡುವ ಮೂಲಕ ತಪ್ಪುದಾರಿಗೆ ಎಳೆಯುತ್ತಿದೆ ಎಂದು ಟೀಕಿಸಿದ ಅವರು, ಎಐಸಿಸಿ ಮುಖಂಡ ರಾಹುಲ್ ಗಾಂಧಿಗೆ ಏನು ತಿಳಿಯುವುದಿಲ್ಲ. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೂ ತಿಳಿಯುವುದಿಲ್ಲವೇ? ಎಂದು ಪ್ರಶ್ನಿಸಿದರು.

ಜಿಲ್ಲೆಯ ಮಹದಾಯಿ ನದಿ ವಿಚಾರವಾಗಿ ಕೇಂದ್ರ ಸರಕಾರ ಉಪ ಚುನಾವಣೆ ಸಂದರ್ಭದಲ್ಲಿ ಆದೇಶ ಮಾಡಿ ಉಪಚುನಾವಣೆ ಮುಗಿದ ಬಳಿಕ ಆದೇಶ ಹಿಂಪಡೆದಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಹಿತದೃಷ್ಟಿಯ ವಿಚಾರದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಈ ಬಗ್ಗೆ ಸರಕಾರ ಕ್ರಮ ವಹಿಸಲಿದೆ ಎಂದು ಪ್ರತಿಕ್ರಿಯೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ ಕವಟಗಿಮಠ, ರಾಜು ಚಿಕ್ಕನಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News