ಯೋಜನೆ ಹೆಸರಲ್ಲಿ ದಾರಿತಪ್ಪಿಸುವ ಕೆಲಸ, ವದಂತಿಗಳಿಗೆ ರೈತರು ಕಿವಿಗೊಡಬಾರದು: ಬಿ.ಸಿ.ಪಾಟೀಲ್ ಮನವಿ
ಹಾವೇರಿ, ಅ.6: ಕೆಲವು ಕಿಡಿಗೇಡಿಗಳು ರೈತರನ್ನು ಯೋಜನೆಯ ಹೆಸರಿನಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಇಲ್ಲಸಲ್ಲದ ವದಂತಿ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ರೈತರ ಹೆಸರಿನಲ್ಲಿ ಕೆಲವರು ಅನವಶ್ಯಕ ಧರಣಿ ನಡೆಸುತ್ತಿರುವುದು ವಿಷಾದನೀಯ ಎಂದರು.
ನೈಸರ್ಗಿಕವಾದ ನೆಲ ಜಲದ ಮೇಲೆ ಯಾರಿಗೂ ಹಕ್ಕಿರುವುದಿಲ್ಲ. ಹಿರೇಕೆರೂರಿನಿಂದ ಶಿಕಾರಿಪುರಕ್ಕೆ ಹೋಗುವ ಉಡುಗಣಿ-ತಾಳಗುಂದ-ಹೊಸೂರು ಏತ ನೀರಾವರಿ ಯೋಜನೆಯಲ್ಲಿ ಹಿರೇಕೆರೂರಿನ ವರಹ ನಿಟ್ನೇಗಿಲು, ಬನ್ನಟ್ಟಿ, ಬಳ್ಳೂರು, ಚಿಕ್ಕೇರೂರು, ಯಲ್ಲಾಪುರ ಸೇರಿದಂತೆ ತಾಲೂಕಿನ ಏಳು ಕೆರೆಗಳು ಯೋಜನೆಯಿಂದ ತುಂಬುತ್ತವೆ ಎಂದು ಅವರು ಹೇಳಿದರು.
ಪೈಪ್‍ಲೈನ್ ಮೂಲಕ ನೀರು ಹಾಯಿಸಲಾಗುತ್ತಿದ್ದು, ಕೆಲವು ಕಿಡಿಗೇಡಿಗಳು ರೈತರ ಹೆಸರಿನಲ್ಲಿ ದುರುದ್ದೇಶಪೂರ್ವಕವಾಗಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಯಾವುದಾದರೊಂದು ನೀರಾವರಿ ಯೋಜನೆ ಕಾರ್ಯಗತವಾಗಬೇಕಾದರೆ ಹಲವಾರು ಸ್ಥಳಗಳಿಂದ ಹಾದು ಹೋಗಬೇಕಾಗುತ್ತದೆ. ಜನರು ವಾಸ್ತವಾಂಶವನ್ನು ಅರಿಯಬೇಕು ಎಂದು ಅವರು ಮನವಿ ಮಾಡಿದರು.
ಅಲ್ಲದೇ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಿಂದ ರೈತರಿಗಾಗಲೀ ಜನರಿಗಾಗಲೀ ಯಾವುದೇ ತೊಂದರೆಯಾಗದು. ಯೋಜನೆಯಿಂದ ಹಿರೇಕೆರೂರು ತಾಲೂಕಿನ ಕೆರೆಗಳು ತುಂಬಿ ಅನುಕೂಲವೇ ಆಗಲಿದೆ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಹಿರೇಕೆರೂರು ತಾಲೂಕಿನ ಮಡ್ಲೂರು ಏತನೀರಾವರಿ ಯೋಜನೆ ಹಾನಗಲ್ ತಾಲೂಕಿನ ಹೊಂಕಣದಿಂದ ಬರುತ್ತಿದೆ. ಸರ್ವಜ್ಞ ಏತನೀರಾವರಿ ಯೋಜನೆ ಉಕ್ಕಡಗತ್ರಿ ರಾಣೆಬೆನ್ನೂರು ಗಡಿಯಿಂದ ಬರುತ್ತಿದೆ. ಹಿರೇಕೆರೂರು ಪಟ್ಟಣಕ್ಕೆ ಕುಡಿಯುವ ನೀರನ್ನು ತುಮ್ಮಿನಕಟ್ಟಿಯಿಂದ ಬರುತ್ತಿದೆ. ಹೀಗೆ ಬೇರೆ ತಾಲೂಕಿನಿಂದ ಹಿರೇಕೆರೂರಿಗೆ ಮೂರು ಯೋಜನೆಗಳು ಬರುತ್ತಿವೆ. ವಿನಾಕಾರಣ ರೈತರನ್ನು ದಾರಿತಪ್ಪಿಸುವುದರಿಂದ ಯಾರಿಗೇನು ಲಾಭವಾಗುತ್ತಿದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.
ನೀರಾವರಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಂತಹವರ ಮಾತಿಗೆ ಅಪಪ್ರಚಾರಕ್ಕೆ ರೈತಬಾಂಧವರು ಯಾವುದೇ ಕಾರಣಕ್ಕೆ ಬೆಲೆ ಕೊಡಬಾರದು. ರೈತರಿಗೆ ಸರಕಾರ ಯಾವುದೇ ರೀತಿ ಅನ್ಯಾಯ ಮಾಡುವುದಿಲ್ಲ. ವದಂತಿಗಳಿಗೆ ಕಿವಿಗೊಡಬಾರದೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು.