ಪರಿಷತ್‍ ಚುನಾವಣೆ: ಅಭ್ಯರ್ಥಿಗಳು 50,000ಕ್ಕಿಂತ ಅಧಿಕ ನಗದು ಇಟ್ಟುಕೊಳ್ಳುವಂತಿಲ್ಲ; ಚುನಾವಣಾ ಆಯೋಗ

Update: 2020-10-06 13:26 GMT

ಬೆಂಗಳೂರು, ಅ.6: ಈ ತಿಂಗಳಾಂತ್ಯಕ್ಕೆ ರಾಜ್ಯದ ನಾಲ್ಕು ವಿಧಾನಪರಿಷತ್ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 50 ಸಾವಿರಕ್ಕಿಂತ ಅಧಿಕ ನಗದು ಇಟ್ಟುಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗವು ತಿಳಿಸಿದೆಯಾದರೂ, ಯಾವುದೇ ಮಿತಿ ಹೇರಿಕೆ ಮಾಡಿಲ್ಲ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ವೆಚ್ಚದ ಮಿತಿ ಇದೆ. ವಿಧಾನ ಪರಿಷತ್‍ನ ಈ ಚುನಾವಣೆಗೆ ವೆಚ್ಚದ ಮಿತಿ ಇಲ್ಲದಿದ್ದರೂ ಇತರೆ ಚುನಾವಣೆಗಳಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬಳಿ 50 ಸಾವಿರಕ್ಕಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ. ನಾಮಪತ್ರ ಸಲ್ಲಿಸಲು ಮೆರವಣಿಗೆ ನಡೆಸುವಂತಿಲ್ಲ. ನಾಮಪತ್ರ ಸಲ್ಲಿಸುವಾಗ ಎರಡು ವಾಹನಗಳನ್ನು ಮಾತ್ರ ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ ತಂಡಗಳನ್ನೂ ನೇಮಿಸಲಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ 70 ಲಕ್ಷ ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ 28 ಲಕ್ಷದವರೆಗೆ ವೆಚ್ಚಮಾಡಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆದರೆ, ಅಭ್ಯರ್ಥಿಗಳು ಇಷ್ಟು ಹಣವನ್ನು ಖರ್ಚು ಮಾಡಿಲ್ಲ ಎಂದು ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವಿವರಗಳಲ್ಲಿದೆ. ಇನ್ನು, 2013 ರಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಮಿತಿಯು ಆಯೋಗ ನಿಗದಿ ಮಾಡಿದ್ದಕ್ಕಿಂತ ಶೇ.50 ರಷ್ಟು ಕಡಿಮೆ ಇದೆ.

ಚುನಾವಣಾ ಅಕ್ರಮ ಹಾಗೂ ‘ಕಪ್ಪು ಹಣ’ದ ಚಲಾವಣೆ ತಡೆಯಲು ವಿಧಾನಸಭಾ ಚುನಾವಣೆಯಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಹಾಗೂ ಲೋಕಸಭಾ ಚುನಾವಣೆಯಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಚೆಕ್ ಅಥವಾ ಇತರೆ ಆನ್‍ಲೈನ್ ಕ್ರಮಗಳ ಮೂಲಕವೇ ಪಾವತಿಸುವಂತೆ ಆಯೋಗ ಷರತ್ತು ವಿಧಿಸಲಾಗಿದೆ (ಈಗಲೂ ಅಂತಹ ಷರತ್ತುಗಳಿವೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News