×
Ad

4 ತಿಂಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಸ್‍ಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ ಮಾಲಕರು

Update: 2020-10-06 19:41 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ಪ್ರಯಾಣಿಕರಿಲ್ಲದ ಕಾರಣ ಬಸ್‍ಗಳನ್ನು ರಸ್ತೆಗಿಳಿಸಲು ಹೆದರುತ್ತಿರುವ ಬಸ್‍ಗಳ ಮಾಲಕರು, ತೆರಿಗೆಯಿಂದ ಪಾರಾಗಲು ಕಳೆದ ನಾಲ್ಕು ತಿಂಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಸ್‍ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.

ಕೋವಿಡ್‍ಗೆ ಹೆದರಿ ಸಾಕಷ್ಟು ಜನ ಸ್ವಂತ ವಾಹನದಲ್ಲೇ ಸಂಚರಿಸುತ್ತಿದ್ದು, ಇದು ಬಸ್ ಮಾಲಕರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಸಾರಿಗೆ ಇಲಾಖೆಗೆ ಒಪ್ಪಿಸುವ ಹಾದಿ ಹಿಡಿದಿದ್ದಾರೆ.

ಬಸ್ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂಬುದಕ್ಕೆ ದಾಖಲೆ, ನೋಂದಣಿ ಪತ್ರ ಸೇರಿ ಎಲ್ಲಾ ದಾಖಲೆಗಳನ್ನು ಸಾರಿಗೆ ಇಲಾಖೆಗೆ ನೀಡಬೇಕು. ಇಷ್ಟು ಮಾಡಿದರೆ ಮೂರು ತಿಂಗಳಿಗೊಮ್ಮೆ ಪಾವತಿಸಬೇಕಾದ 48 ಸಾವಿರದಿಂದ 2 ಲಕ್ಷದವರೆಗಿನ ತೆರಿಗೆ ಉಳಿಯಲಿದೆ. ಕೋವಿಡ್ ಕಾರಣದಿಂದ ಈಗಾಗಲೇ ನಾವು ಸಾಕಷ್ಟು ಕಳೆದುಕೊಂಡಿದ್ದೇವೆ. ದಿನಕ್ಕೆ 8 ಸಾವಿರ ಸಂಪಾದನೆ ಮಾಡುತ್ತಿದ್ದ ಬಸ್‍ಗಳಲ್ಲಿ 4 ಸಾವಿರವನ್ನೂ ದುಡಿಯಲು ಆಗುತ್ತಿಲ್ಲ. ಇದು ಇಂಧನ ವೆಚ್ಚಕ್ಕೂ ಸಾಕಾಗುತ್ತಿಲ್ಲ. ಸಾರಿಗೆ ಇಲಾಖೆಗೆ ಒಪ್ಪಿಸುವುದನ್ನು ಬಿಟ್ಟು ಬೇರೆ ದಾರಿ ಕಾಣಿಸುತ್ತಿಲ್ಲ ಎಂದು ಕರ್ನಾಟಕ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ ತಿಳಿಸಿದ್ದಾರೆ.

ರಾಜ್ಯ ಸರಕಾರದ ಮಾರ್ಗದರ್ಶಿ ಸೂತ್ರದ(ಎಸ್‍ಒಪಿ) ಪ್ರಕಾರ ಶೇ 50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಹೀಗಿರುವಾಗ ಬಸ್ ಕಾರ್ಯಾಚರಣೆ ಕಷ್ಟ. ಟ್ಯಾಕ್ಸಿ ಚಾಲಕರು ಕೂಡ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಟ್ಯಾಕ್ಸಿ ಮಾಲಕರ ಹಿತವನ್ನು ಸರಕಾರ ಕಾಪಾಡಬೇಕು ಎಂದು ಕರ್ನಾಟಕ ಪ್ರವಾಸಿ ವಾಹನಗಳ ಮಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News