ಶಿರಾ ಕ್ಷೇತ್ರಕ್ಕೆ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಜೆಡಿಎಸ್ ಅಭ್ಯರ್ಥಿ: ದೇವೇಗೌಡ

Update: 2020-10-06 14:30 GMT

ಬೆಂಗಳೂರು, ಅ. 6: ತುಮಕೂರು ಜಿಲ್ಲೆ ಶಿರಾ ಕ್ಷೇತ್ರಕ್ಕೆ ಶಾಸಕ ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅವರ ಪುತ್ರ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರು ಒಪ್ಪಿಗೆ ನೀಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅಮ್ಮಾಜಮ್ಮಗೆ ಉಪ ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿ ಇಲ್ಲ ಎಂಬುದು ಸುಳ್ಳು. ಸತ್ಯನಾರಾಯಣರ ಪತ್ನಿಯೇ ಜೆಡಿಎಸ್ ಅಭ್ಯರ್ಥಿ. ಅವರ ಪುತ್ರ ಸಕ್ರಿಯರಾಗಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಪಕ್ಷದವರನ್ನು ಕಾಂಗ್ರೆಸ್-ಬಿಜೆಪಿಯವರು ಸೆಳೆದುಕೊಂಡಿದ್ದಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಜೆಡಿಎಸ್ ಬಗ್ಗೆ ಯಾರಿಗೂ ಅನುಕಂಪ ಬೇಡ. ಅವರನ್ನು ಗೆಲ್ಲಿಸಲು ಜೆಡಿಎಸ್ ಶ್ರಮಿಸಲಿದೆ ಎಂದರು.

ಶಿರಾ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಉಪ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಎಂದ ದೇವೇಗೌಡ, `ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರು ಎಲ್ಲಿಂದ ಬಂದರು, ಹೇಗೆ ಬಂದರು ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ. ಅವರು ದೊಡ್ಡವರು, ಅವರಿಗೆ ಶಕ್ತಿ ಇದೆ. ಜನರು ಅವರ ಮಾತನ್ನ ಹೇಗೆ ಸ್ವೀಕಾರ ಮಾಡ್ತಾರೆ, ತಿರಸ್ಕಾರ ಮಾಡ್ತಾರೆ ಅವರಿಗೆ ಬಿಟ್ಟ ವಿಚಾರ ಎಂದು ಟೀಕಿಸಿದರು.

ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಈಗಾಗಲೇ ಮೂವರು ಯುವ ಮುಖಂಡರನ್ನು ಆಯ್ಕೆ ಮಾಡಲಾಗಿದೆ. ಆ ಪೈಕಿ ಒಬ್ಬರಿಗೆ ಟಿಕೆಟ್ ನೀಡಲಾಗುವುದು ಎಂದ ದೇವೇಗೌಡ, ಈ ಬಗ್ಗೆ ಅ.8ಕ್ಕೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಸೋಲು-ಗೆಲುವು ಬೇರೆ. ಆದರೆ, ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News