ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ ನಿಧನ
ದಾವಣಗೆರೆ, ಅ.6: ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್(72) ಹೃದಯಾಘಾತದಿಂದ ಇಲ್ಲಿನ ಬಾಪೂಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವೃತ್ತಿ ರಂಗಭೂಮಿಯಲ್ಲಿ ಜ್ಯೂನಿಯರ್ ರಾಜ್‍ಕುಮಾರ್ ಎಂದೇ ಜನಪ್ರಿಯರಾಗಿದ್ದ ಕೊಡಗನೂರು ಜಯಕುಮಾರ್, ಗುಬ್ಬಿ ಕಂಪೆನಿ, ಕೆಬಿಆರ್ ಕಂಪೆನಿ, ಕುಮಾರೇಶ್ವರ ನಾಟಕ ಸಂಘ, ಕರ್ನಾಟಕ ಕಲಾವೈಭವ ಸಂಘ, ಸಂಗಮೇಶ್ವರ ನಾಟಕ ಸಂಘ ಸೇರಿದಂತೆ ಹಲವು ನಾಟಕ ಕಂಪೆನಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮುದುಕನ ಮದುವೆ, ಟಿಪ್ಪು ಸುಲ್ತಾನ್, ಗೋಮುಖ ವ್ಯಾಘ್ರ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಾಂಗ್ಲಿಯಾನ-3, ಜನುಮದಜೋಡಿ, ಕಿಟ್ಟಿ, ಜಾಕಿ ಸೇರಿ 50ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಪಾಪ ಪಾಂಡು, ಸಂಕ್ರಾಂತಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅವರು ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಅಗಲಿಕೆಗೆ ರಂಗಭೂಮಿ, ಕಿರುತೆರೆ, ಸಿನೆಮಾ ಕ್ಷೇತ್ರದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.