ಪಿಪಿಇ ಕಿಟ್‍ಗಳ ನಿರ್ವಹಣೆ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-10-06 14:37 GMT

ಬೆಂಗಳೂರು, ಅ.6: ಪಿಪಿಇ ಕಿಟ್‍ಗಳ ವೈಜ್ಞಾನಿಕ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕಿಟ್ ನಿರ್ವಹಣೆಯ ವಿಧಾನಗಳನ್ನು ತಿಳಿಸುವಂತೆ ನಿರ್ದೇಶಿಸಿದೆ.

ಈ ಕುರಿತು ನಗರದ ವಕೀಲರಾದ ಕೆ.ಬಿ ವಿಜಯ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ನ್ಯಾಯಪೀಠವು ರಾಜ್ಯ ಸರಕಾರ, ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಈ ವೇಳೆ ಅರ್ಜಿದಾರ ವಕೀಲ ಕೆ.ಬಿ.ಚಂದ್ರಶೇಖರ್ ವಾದಿಸಿ, ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಬಳಸುತ್ತಿರುವ ಪಿಪಿಇ ಕಿಟ್‍ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಆದರೆ, ಈ ಸಂಬಂಧ ಯಾವುದೇ ಸೂಕ್ತ ಮಾರ್ಗಸೂಚಿಗಳು ಇರುವಂತೆ ಕಾಣುವುದಿಲ್ಲ. ಸೋಂಕಿತರಷ್ಟೇ ಅಲ್ಲದೆ, ಇತರೆ ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುವ ಜನರು ಬಳಸುವ ಪಿಪಿಇ ಕಿಟ್‍ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ವಿವರಿಸಿದರು.

ಇದೇ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪಿಪಿಇ ಕಿಟ್‍ಗಳನ್ನು ವಿಲೇವಾರಿ ಮಾಡುವ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನಗರದಲ್ಲಿ 380 ಕೋವಿಡ್ ಆಸ್ಪತ್ರೆಗಳಿವೆ ಎಂದು ತಿಳಿಸಿದ್ದೀರಿ. ಈ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ನರ್ಸ್‍ಗಳಿಂದ ಹಿಡಿದು ವೈದ್ಯರವರೆಗೆ ಎಲ್ಲರೂ ಪಿಪಿಇ ಕಿಟ್ ಬಳಕೆ ಮಾಡುತ್ತಾರೆ. ಇದಲ್ಲದೇ, ಕೋವಿಡ್ ಅಲ್ಲದ ಸಾಮಾನ್ಯ ಆಸ್ಪತ್ರೆಗಳಲ್ಲಿ, ಪ್ಯಾರಾ ಮೆಡಿಕಲ್ ಸಂಸ್ಥೆಗಳಲ್ಲಿ, ಸಾರ್ವಜನಿಕರು ಮನೆಗಳಲ್ಲಿ ಬಳಸುವ ಕಿಟ್‍ಗಳ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿತು.

ಅಕ್ಟೋಬರ್ 17ರೊಳಗೆ ಪಿಪಿಇ ಕಿಟ್‍ಗಳನ್ನು ವೈಜ್ಞಾನಿಕವಾಗಿ ಹೇಗೆ ಸಂಗ್ರಹಿಸಲಾಗುವುದು ಮತ್ತು ವಿಲೇವಾರಿ ಮಾಡಲಾಗುವುದು ಎಂಬ ಮಾಹಿತಿಯನ್ನು ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News