ಕಾಂಗ್ರೆಸ್ ಮುಖಂಡರನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ: ಸತೀಶ್ ಜಾರಕಿಹೊಳಿ ಪ್ರಶ್ನೆ

Update: 2020-10-06 14:44 GMT

ಬೆಳಗಾವಿ, ಅ. 6: `ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲರೂ ಸತ್ಯಹರಿಶ್ಚಂದ್ರರೇ? ಹಾಗಿದ್ದರೆ ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ' ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಸತ್ಯಹರಿಶ್ಚಂದ್ರ ಅಲ್ಲ ಎನ್ನುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿಬಿಐ ದಾಳಿಯ ಹಿಂದೆ ಕುತಂತ್ರ ಇದೆ ಎನ್ನುವದನ್ನು ಒಪ್ಪಿಕೊಂಡಿದ್ದಾರೆ. ರಾಜಕೀಯದಲ್ಲಿ ಯಾರೂ ಹರಿಶ್ಚಂದ್ರ ಇರುವುದಿಲ್ಲ, ಆದರೆ, ಎಲ್ಲದಕ್ಕೂ ಒಂದು ಮೀತಿ ಇರಬೇಕು ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮರೆಮಾಚುತ್ತಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರವನ್ನು ಶೇ.10ರ ಭ್ರಷ್ಟ ಸರಕಾರ ಎಂದು ಪ್ರಧಾನಿ ಮೋದಿ ಜರಿದಿದ್ದರು. ಇದೀಗ ರಾಜ್ಯದಲ್ಲಿನ ಅವರದ್ದೇ ಬಿಜೆಪಿ ಸರಕಾರ ಶೇ.30ರಷ್ಟು ಭ್ರಷ್ಟ ಸರಕಾರವಾಗಿದೆ. ಈಗ ಪ್ರಧಾನಿ ಮೋದಿ ಅದನ್ನು ಹೇಳಬೇಕಲ್ಲವೇ? ಎಂದು ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.

ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ತನಿಖೆ ನಡೆಸುದಾದರೆ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ರಾಜಕಾರಣಿಗಳ ಮೇಲೆ ನಡೆಯಲಿ. ಅದು ಬಿಟ್ಟು ಕಾಂಗ್ರೆಸ್ ಪಕ್ಷದವರು ಅಷ್ಟೇ ಯಾಕೆ ಈ ದಾಳಿಗೆ ಟಾರ್ಗೆಟ್ ಆಗಬೇಕು. ಅದರಲ್ಲಿ ಡಿಕೆಶಿ ಒಬ್ಬರೆ ಯಾಕೆ ಟಾರ್ಗೆಟ್ ? ಬಿಜೆಪಿಯ ಮುಖಂಡರ್ಯಾರು ಸಂಪಾದನೆ ಮಾಡಿಲ್ಲವೇ? ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು ಸತೀಶ್ ಜಾರಕಿಹೊಳಿ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News