ಜೋಶಿ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗಪಡಿಸಲಿ: ಡಿ.ಕೆ.ಶಿವಕುಮಾರ್ ಸವಾಲು

Update: 2020-10-06 15:21 GMT

ಬೆಂಗಳೂರು, ಅ.6: ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ಅ.10 ರಂದು ಮಂಡ್ಯದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಆದೇಶದಂತೆ ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡಲು ನಿರ್ಧರಿಸಿದ್ದೆವು. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡುತ್ತಿದ್ದೇವೆ ಎಂದರು.

ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಬಂಡವಾಳಶಾಹಿಗಳ ನಿಯಂತ್ರಣಕ್ಕೆ ನೀಡಲು ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಸೆ.25 ರಂದು ಪ್ರತಿಭಟನೆ ಮಾಡಿದ್ದೆವು. ಅ.2ರಂದು ಕಿಸಾನ್ ಮಜ್ದೂರ್ ದಿನ ಆಚರಿಸಿ ತಾಲೂಕು ಮಟ್ಟದಲ್ಲೂ ಹೋರಾಟ ಮಾಡಿದ್ದೆವು ಎಂದು ಅವರು ಹೇಳಿದರು.

ರೈತರ ಸಮ್ಮೇಳನ ಪಕ್ಷಾತೀತ ಕಾರ್ಯಕ್ರಮ. ಆರು ಜನ ರೈತ ಮುಖಂಡರು ಈ ಸಭೆಯಲ್ಲಿ ಮಾತನಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ನಮ್ಮ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಸಹಿ ಸಂಗ್ರಹ ಅಭಿಯಾನ: ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದೇವೆ. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ 2 ಕೋಟಿ ಸಹಿ ಸಂಗ್ರಹಿಸಲಾಗುವುದು. ಈ ಸಹಿಗಳುಳ್ಳ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸುತ್ತೇವೆ. ಅವರು ರಾಷ್ಟ್ರಪತಿ ಅವರಿಗೆ ಸಲ್ಲಿಸಲಿದ್ದಾರೆ. ಈ ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಮನವಿ ಮಾಡುತ್ತಾರೆ. ಈ ಅಭಿಯಾನದಲ್ಲಿ ಎಲ್ಲ ರೈತರು ಹಾಗೂ ಎಲ್ಲ ವರ್ಗದ ಜನ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರ ಸಚಿವರಿಂದಲೇ ರಾಜೀನಾಮೆ: ಕೇಂದ್ರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೇಸತ್ತು ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರಕಾರ ಹೇಗೆ ರೈತರ ವಿರುದ್ಧ ನಿಂತಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಕಾಲಿದಳ ಎನ್‍ಡಿಎ ಮೈತಿಕೂಟದಿಂದ ಹೊರಬಂದಿದೆ. ರೈತರ ಪರವಾಗಿ ಅವರು ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೇಂದ್ರದ ಸಚಿವರೊಬ್ಬರು ಪ್ರತಿಭಟನೆ ಮಾಡುವವರು ರೈತರೇ ಅಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ರೈತರೆ ಉತ್ತರ ನೀಡಲಿದ್ದಾರೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ಏನನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ: ರಾಜಕಾರಣದಲ್ಲಿ ನಾವು ಯಾವುದನ್ನೂ ಗೌಪ್ಯವಾಗಿ ಇಡಲು ಸಾಧ್ಯವಿಲ್ಲ. ಡಿ.ಕೆ.ಸುರೇಶ್ ಅವರ ದಿಲ್ಲಿ ನಿವಾಸದಲ್ಲಿ 1.50 ಲಕ್ಷ, ನಮ್ಮ ಮನೆಯಲ್ಲಿ 1.77 ಲಕ್ಷ, ನನ್ನ ಕಚೇರಿಯಲ್ಲಿ 3.50 ಲಕ್ಷ ರೂಪಾಯಿ ಸಿಕ್ಕಿದೆ. ಊರಿನಲ್ಲಿ ನನ್ನ ತಾಯಿಯವರಿಗೆ ಕೇಳಿದಾಗ, ಅವರು ಏನೂ ತೆಗೆದುಕೊಂಡು ಹೋಗಿಲ್ಲ ಅಂದ್ರು. ಮುಂಬೈಯ ಮನೆಗೆ ನಾನು ಹೋಗಿ 6 ವರ್ಷ ಆಯ್ತು. ದಿಲ್ಲಿಯ ಮನೆಯಲ್ಲಿ ಏನೂ ಇಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಸಿಬಿಐ ದಾಳಿ ಕುರಿತು ಅವರು ಮಾಹಿತಿ ನೀಡಿದರು.

ನನ್ನ ಸ್ನೇಹಿತ ಸಚಿನ್ ನಾರಾಯಣ ಅವರ ಮನೆಯಲ್ಲಿ ಅವರ ವ್ಯವಹಾರಕ್ಕೆ ಸಂಬಂಧಿಸಿದ 50 ಲಕ್ಷ ರೂಪಾಯಿ ಸಿಕ್ಕಿದೆಯಂತೆ. ಸಚಿನ್ ಅವರ ಜತೆ ಮಾತನಾಡಲು ಅವರು ಇನ್ನು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಧವನಂ ಬಿಲ್ಡರ್ಸ್ ಹತ್ರ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ನಿಮಗೆ ಬೇಕು ಎಂದರೆ ಪಂಚನಾಮ ಬಿಡುಗಡೆ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಪ್ರಹ್ಲಾದ್ ಜೋಶಿ ತಮ್ಮ ಪಕ್ಷದವರ ಆಸ್ತಿ ಬಹಿರಂಗ ಪಡಿಸಲಿ: ಪ್ರಹ್ಲಾದ್ ಜೋಶಿ ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ. ಅವರು ನಮ್ಮ ಆಸ್ತಿ ಮುಂಚೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.

ಈ ದಾಳಿಗಳು ರಾಜಕೀಯ ಪ್ರೇರಿತ ಎಂಬುದನ್ನು ತಿಳಿಯಬೇಕಾದರೆ, ಎಫ್‍ಐಆರ್ ಪ್ರತಿ ನೋಡಿ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ? ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ? ಎಫ್‍ಐಆರ್ ದಾಖಲಿಸಿದ್ದು ಯಾವಾಗ? ಎಂಬುದನ್ನು ನೋಡಿ. ಆಗ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಡಾ.ಬಿ.ಎಲ್.ಸಂತೋಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News