ಶಿರಾ, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಸಚಿವ ಆರ್.ಅಶೋಕ್

Update: 2020-10-06 16:22 GMT

ಬೆಂಗಳೂರು, ಅ. 6: ಕೊರೋನ ಅವ್ಯವಹಾರ ಮರೆಮಾಚಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ ಎಂಬುದು ಸತ್ಯಕ್ಕೆ ದೂರ. ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊರೋನ ಸೋಂಕು ನಿವಾರಣೆಗೆ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೆ ಅವ್ಯವಹಾರ ನಡೆದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಎರಡು ಉಪ ಚುನಾವಣೆ ಗೆಲುವಿಗೆ ಬಿಜೆಪಿ ಶಿವಕುಮಾರ್ ಅವರ ಹೆಸರು ಬಳಸಿಕೊಳ್ಳುವ ಅಗತ್ಯವೇನು ನಮ್ಮ ಪಕ್ಷಕ್ಕೆ ಇಲ್ಲ ಎಂದು ತಿರುಗೇಟು ನೀಡಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಮಾಜಿ ಶಾಸಕ ಮುನಿರತ್ನ ಅವರಿಗೆ ಪಕ್ಷ ಟಿಕೆಟ್ ನೀಡಲಿದ್ದು, ಈ ಬಗ್ಗೆ ವರಿಷ್ಟರು ತೀರ್ಮಾನ ಮಾಡಲಿದ್ದಾರೆ. ಅದೇ ರೀತಿಯಲ್ಲಿಯೂ ಶಿರಾ ವಿಧಾನಸಭಾ ಕ್ಷೇತ್ರಕ್ಕೂ ಶೀಘ್ರವೇ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ ಎಂದು ತಿಳಿಸಿದರು.

ಸಿಬಿಐ ರಾಜಕೀಯ ಪ್ರೇರಿತ ಖಂಡಿತ ಅಲ್ಲ. ಸಿಬಿಐ ಸ್ವತಂತ್ರ ಸಂಸ್ಥೆ. ಈಗಾಗಲೇ ದಾಖಲಾಗಿರುವ ಪ್ರಕರಣಗಳ ತನಿಖೆ ಭಾಗವಾಗಿ ದಾಳಿಯೂ ನಡೆದಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆಯೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ದಾಳಿ ನಡೆದಿತ್ತು. ಆದರೆ, ಅದನ್ನು ಕಾಂಗ್ರೆಸ್ ಮಾಡಿಸಿತ್ತೇ ಎಂದು ಅಶೋಕ್ ಖಾರವಾಗಿ ಪ್ರಶ್ನೆ ಮಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್) ಅದೊಂದು ಸ್ವಾಯತ್ತ ಸಂಸ್ಥೆ. ಅದು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಆರೆಸೆಸ್ಸ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅಶೋಕ್, ರಾಜಕೀಯದಲ್ಲಿ ಇಲ್ಲದವರನ್ನು ಏಕೆ ಪ್ರಸ್ತಾಪ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News