ರಾಜ್ಯದ 16 ಜಿಲ್ಲೆಗಳ 43 ತಾಲೂಕುಗಳು ಅತಿವೃಷ್ಟಿ, ಪ್ರವಾಹ ಪೀಡಿತ: ರಾಜ್ಯ ಸರಕಾರ ಘೋಷಣೆ

Update: 2020-10-06 16:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿನ 16 ಜಿಲ್ಲೆಗಳ 43 ತಾಲೂಕುಗಳನ್ನು ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳು ಎಂದು ರಾಜ್ಯ ಸರಕಾರ ಘೋಷಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಕೆ. ಉಮಾಪತಿ ನಡವಳಿಗಳನ್ನು ಪ್ರಕಟಿಸಿದ್ದು, 2020ನೇ ಸಾಲಿನ ಮುಂಗಾರು ಋತುವಿನ ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾಗಿರುವ ಅತಿವೃಷ್ಟಿ, ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯದ 16 ಜಿಲ್ಲೆಗಳ 43 ತಾಲೂಕುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಯಾವ್ಯಾವ ತಾಲೂಕು: ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಹಾವೇರಿ ಜಿಲ್ಲೆಯ ಬ್ಯಾಡಗಿ ಸವಣೂರು, ವಿಜಯಪುರ ಜಿಲ್ಲೆಯ ವಿಜಯಪುರ, ಬಸವನಬಾಗೇವಾಡಿ, ತಾಳಿಕೋಟೆ, ಇಂಡಿ, ಸಿಂಧಗಿ, ದೇವರ ಹಿಪ್ಪರಗಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು, ಗದಗ ಜಿಲ್ಲೆಯ ಗದಗ, ಗಜೇಂದ್ರಗಡ, ಲಕ್ಷ್ಮೀಪುರ, ರಾಯಚೂರು ಜಿಲ್ಲೆಯ ಮಸ್ಕಿ, ಶ್ರೀವಾರ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಅಜ್ಜಂಪುರ, ಕಲಬುರಗಿ ಜಿಲ್ಲೆಯ ಚಿಂಚೋಳ್ಳಿ, ಯಡ್ರಾವಿ.

ಮೈಸೂರು ಜಿಲ್ಲೆಯ ನಂಜನಗೂಡು, ಹೆಚ್.ಡಿಕೋಟೆ, ಸರಗೂರು, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ, ಉತ್ತರಕನ್ನಡ ಜಿಲ್ಲೆಯ ಹಳಿಯಾಲ, ದಾಂಡೇಲಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಸಂಡೂರು, ತುಮಕೂರು ಜಿಲ್ಲೆಯ ಮಧುಗಿರಿ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿ ಯಲಬುರ್ಗಾ, ಕುಕನೂರು, ಬೀದರ್ ಜಿಲ್ಲೆಯ ಕಮಾಲಾನಗರ, ಚಿಟ್ಟಿಗುಪ್ಪ, ಹುಲಸೂರು ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರವನ್ನು ಪ್ರವಾಹ ಪೀಡಿತ ಮತ್ತು ಅತಿವೃಷ್ಟಿ ತಾಲೂಕುಗಳೆಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News