ಮೈಸೂರು: ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ನಾಮಫಲಕದಲ್ಲಿ ಹಿಂದಿನ ಡಿಸಿ ಹೆಸರು

Update: 2020-10-06 17:29 GMT

ಮೈಸೂರು,ಅ.6: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕರಿಸಿ ಒಂದು ವಾರ ಕಳೆದರೂ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯ ನಾಮಫಲಕದಲ್ಲಿ ಮಾತ್ರ ಮೈಸೂರು ಜಿಲ್ಲಾಧಿಕಾರಿ ಶರತ್ ಬಿ. ಎಂದೇ ಬರೆಯಲಾಗಿದೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲು ಹತ್ತಿ ಕಚೇರಿ ಒಳಗಡೆ ಪ್ರವೇಶ ಮಾಡುವ ದ್ವಾರದ ಪಕ್ಕದ ಗೋಡೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ 2005 ಎಂಬ ನಾಮಫಲಕದ ಬೋರ್ಡ್ ಇದ್ದು ಮೊದಲಿಗೆ ಈ ಕಚೇರಿಯಲ್ಲಿ ಮಾಹಿತಿ ದಾಖಲೆಗಳನ್ನು ನೀಡುವ ಅಧಿಕಾರಿಯ ಹೆಸರು ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ, ಅಪರ ಜಿಲ್ಲಾಧಿಕಾರಿ ಎಂದು ಇದೆ. 30 ದಿನಗಳ ಒಳಗೆ ಮಾಹಿತಿ ನೀಡದಿದ್ದ ಪಕ್ಷದಲ್ಲಿ ಮೇಲ್ಮನವಿ ಸಲ್ಲಿಸಬೇಕಾದ ಅಧಿಕಾರಿಯ ಹೆಸರು ಶರತ್ ಬಿ., ಜಿಲ್ಲಾಧಿಕಾರಿ ಎಂದು ಇದೆ.

ಈ ಫಲಕ ನೋಡಿದ ಕೆಲವು ಸಾರ್ವಜನಿಕರು ಸಿಎಟಿ ಮೊರೆ ಹೋಗಿರುವ ಶರತ್ ಬಿ. ಅವರು ಮತ್ತೆ ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬರಬಹುದೇನೊ ಎಂದು ಇಲ್ಲಿನ ಸಿಬ್ಬಂದಿ ಈ ಫಲಕವನ್ನು ಬದಲಾಯಿಸಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು. ಒಟ್ಟಾರೆ ಅ.7ರ ಬುಧವಾರ ಶರತ್ ಬಿ. ಅವರ ವಿಚಾರಣೆಯ ತೀರ್ಪು ಹೊರಬೀಳಲಿದ್ದು, ರೋಹಿಣಿ ಸಿಂಧೂರಿ ಅವರೇ ಮುಂದುವರಿಯುವರೋ ಅಥವಾ ಶರತ್ ಬಿ. ಅವರು ಮತ್ತೆ ಬರುವರೋ ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News