ಹೆಚ್ಚುತ್ತಿರುವ ಪ್ರವಾಸಿಗರ ದಟ್ಟಣೆ: ಪ್ರವಾಸಿ ತಾಣಗಳಲ್ಲಿ ಕೊರೋನ ಹರಡುವ ಭೀತಿ !

Update: 2020-10-06 18:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ಲಾಕ್‍ಡೌನ್ ತೆರವುಗೊಂಡಿದ್ದು, ಅನ್‍ಲಾಕ್ 5 ಗೈಡ್‍ಲೈನ್ಸ್ ಪ್ರಕಟಗೊಂಡಿದೆ. ಇದರ ನಡುವೆ ಅನ್‍ಲಾಕ್ ಬಳಿಕ ಸಮೀಪದ ಕಾಡುಗಳು, ಗಿರಿಧಾಮ, ನೀರತೊರೆಗಳು, ರೆಸಾರ್ಟ್‍ಗಳಿಗೆ ತೆರಳುವ ಮೂಲಕ ಸಂಭ್ರಮಿಸಿತೊಡಗಿದ್ದು, ಕೊರೋನ ಅಧಿಕವಾಗುವ ಆತಂಕ ಎದುರಾಗಿದೆ.

ಆರು ತಿಂಗಳಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದ ಪ್ರವಾಸೋದ್ಯಮ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದೇ ವೇಳೆ ವಿಶೇಷವಾಗಿ ಯುವಜನರು ದೊಡ್ಡ ಪ್ರಮಾಣದಲ್ಲಿ ಕೊರೋನ ಸೋಂಕಿನ ಭಯವಿಲ್ಲದೇ ಈ ಸ್ಥಳಗಳಿಗೆ ದಾಂಗುಡಿ ಇಡುತ್ತಿರುವುದು ಆತಂಕದ ವಿಷಯವಾಗಿದೆ. ಈ ಆರು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಯುವ ಜನರು ಸರಕಾರ ಅನ್‍ಲಾಕ್ ಘೋಷಿಸುತ್ತಿದ್ದಂತೆಯೇ ತಂಡೋಪತಂಡವಾಗಿ ಎಲ್ಲೆಡೆ ಕಾಣಿಸಿಕೊಳ್ಳತೊಡಗುತ್ತಿದ್ದಾರೆ.

ಪ್ರವಾಸಿತಾಣಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಗಳನ್ನು ಧರಿಸದೇ ಓಡಾಡುತ್ತಿದ್ದಾರೆ. ವಿವಿಧ ರೆಸಾರ್ಟ್ ಸೇರಿದಂತೆ ರಾಜ್ಯದ ಪ್ರಮುಖ ಗಿರಿಧಾಮವಾಗಿರುವ ಮುಳ್ಯಯ್ಯನಗಿರಿ, ಬಾಬಾ ಬುಡನ್‍ಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ಕೊಡಚಾದ್ರಿ, ಜೋಗ ಜಲಪಾತ, ಸಕಲೇಶಪುರ, ತಲಕಾವೇರಿ, ಮಾಂದಲಪಟ್ಟಿ, ಬೆಂಗಳೂರು ಸಮೀಪದ ನಂದಿ ಗಿರಿಧಾಮ ಸೇರಿದಂತೆ ಹಲವೆಡೆ ಜನರು ಕೊರೋನ ಆತಂಕವಿಲ್ಲದೇ ಸಂಚರಿಸುತ್ತಿದ್ದಾರೆ

ರೆಸಾರ್ಟ್‍ಗಳಲ್ಲಿ ಪಾರ್ಟಿ, ಫೈರ್ ಕ್ಯಾಂಪ್, ಟ್ರಕ್ಕಿಂಗ್, ಸ್ವಿಮ್ಮಿಂಗ್ ವೇಳೆ ಯಾವುದೇ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೇ ಕಾಲ ಕಳೆಯುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಜನರು ನಿಯಮ ಉಲ್ಲಂಘಿಸಿದ ವೇಳೆ ದಂಡ ವಿಧಿಸುವುದು ಅಥವಾ ನಿಯಮ ಉಲ್ಲಂಘಿಸದಂತೆ ತಿಳಿ ಹೇಳುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಸ್ಥಳೀಯರ ಆತಂಕ: ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ಬೆಂಗಳೂರಿನ ನಿವಾಸಿಗಳೇ ಅಧಿಕ ಜನರಾಗಿದ್ದು, ಬೆಂಗಳೂರು ನಗರದಲ್ಲಿಯೇ ಅಧಿಕ ಕೊರೋನ ಸೋಂಕಿತರು ಹೆಚ್ಚಾಗುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಬಂದವರಲ್ಲಿ ಕೆಲವರು ಎಲ್ಲೆಂದರಲ್ಲಿ ಮದ್ಯ ಸೇವನೆ, ಧೂಮಪಾನ ಮಾಡುತ್ತಿದ್ದಾರೆ. ಇದರಿಂದ ಇತರೆ ಪ್ರವಾಸಿಗರಿಗೂ ಕೊರೋನ ಹರಡಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶೇ.25ರಷ್ಟು ಪ್ರವಾಸೋದ್ಯಮ ಚೇತರಿಕೆ: ಲಾಕ್‍ಡೌನ್ ಸಮಯಕ್ಕೆ ಹೋಲಿಸಿಕೊಂಡರೆ ರಾಜ್ಯದ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಶೇ.25 ರಷ್ಟು ಚೇತರಿಸಿಕೊಂಡಿದೆ. ಜನರು ಕೂಡ ನಿಧಾನವಾಗಿ ಬರುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಪ್ರವಾಸಿಗರ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್, ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಒಟ್ಟಾರೆ ಸಾಮರ್ಥ್ಯದಲ್ಲಿ ಕೇವಲ ಶೇ.50 ರಷ್ಟು ಜನರಿಗೆ ಅವಕಾಶ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News