ಕೊರೋನ ಪರೀಕ್ಷೆ ನಿರಾಕರಿಸಿದರೆ ಮೂರು ವರ್ಷ ಜೈಲು: ಆರೋಗ್ಯ ಇಲಾಖೆ ಆದೇಶ

Update: 2020-10-07 14:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.7: ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದರೂ ಕೋವಿಡ್ ಪರೀಕ್ಷೆಗೊಳಪಡಲು ಕೆಲವರು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಹೊಸ ಆದೇಶ ಹೊರಡಿಸಿದ್ದು, ಕೊರೋನ ಪರೀಕ್ಷೆಗೊಳಪಡಲು ನಿರಾಕರಿಸುವವರಿಗೆ ಮೂರು ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲು ಸೂಚಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸರಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಈ ನಡುವೆ ಕೆಲವು ಮಂದಿ ಕೋವಿಡ್ ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಹೀಗಾಗಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.

ಯಾವ ವ್ಯಕ್ತಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ತಿಳಿಸಲಾಗಿದೆಯೋ ಅಂತಹವರು ಕಡ್ಡಾಯವಾಗಿ ಪರೀಕ್ಷೆಗೊಳಪಡಲೇಬೇಕು. ಈ ಮೂಲಕ ಕೋವಿಡ್ ಸೋಂಕು ನಿಯಂತ್ರಿಸಬಹುದಾಗಿದೆ. ಸೋಂಕಿತರ ಸಂಪರ್ಕಕ್ಕೆ ಒಳಗಾಗದ ಪ್ರಾಥಮಿಕ-ದ್ವಿತೀಯ ಸಂಪರ್ಕಿತರು ಸೇರಿದಂತೆ ಜ್ವರದ ಲಕ್ಷಣವಿರುವ ವ್ಯಕ್ತಿಗಳು, ಉಸಿರಾಟ ಸಂಬಂಧಿ ತೊಂದರೆಗಳಿರುವವರು, ಆರೋಗ್ಯ ಸಿಬ್ಬಂದಿ, ಶಂಕಿತ ವ್ಯಕ್ತಿಗಳು ಕಡ್ಡಾಯ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೊರೋನ ಪರೀಕ್ಷೆಗೆ ಜನರು ನಿರಾಕರಿಸುತ್ತಿದ್ದು, ಟೆಸ್ಟ್ ಮಾಡಿಸಿದರೆ ಮರಣ ಪ್ರಮಾಣ ಕಡಿಮೆ ಮಾಡಬಹುದು. ಜನರು ಇದನ್ನು ಅರಿಯಬೇಕು. ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಕಾಯ್ದೆಯ ಸೆಕ್ಷನ್(4)ರ ಪ್ರಕಾರ, ಮಾರ್ಕೆಟ್, ಮಾಲ್, ಥಿಯೇಟರ್ ಮುಚ್ಚಿಸುವ ಕಾನೂನು ಸಹ ಇದೆ. ಈ ಕಾನೂನು ಪಾಲನೆ ಮಾಡದವರನ್ನು ಬಂಧಿಸಬಹುದು. ಈ ಕಾಯ್ದೆಯಡಿ 'ಮಾಸ್ಕ್ ಧರಿಸದ' ಜನಸಾಮಾನ್ಯರ ಮೇಲೆ ಎಪಿಡಮಿಕ್ ಆಕ್ಟ್ ವಿಧಿಸಲು ಅವಕಾಶವಿದೆ. ಹಾಗಾಗಿ, ಜನ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ವಿವರಿಸಿದರು.

ಜನಸಾಮಾನ್ಯರು ಮಾತ್ರ ಟಾರ್ಗೆಟ್: ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯನಾ? ಮಾಸ್ಕ್ ಧಾರಣೆ ವಿಚಾರದಲ್ಲಿ ಜನಸಾಮಾನ್ಯರು ಮಾತ್ರ ಟಾರ್ಗೆಟ್ ಏಕೆ? ಜನಪ್ರತಿನಿಧಿಗಳಿಗೆ ರೂಲ್ಸ್ ಅಪ್ಲೈ ಆಗಲ್ವಾ? ಇಲ್ಲಿತನಕ ಮಾಸ್ಕ್ ಧರಿಸದ ಒಬ್ಬರೇ ಒಬ್ಬ ಜನಪ್ರತಿನಿಧಿಗೂ ದಂಡ ವಿಧಿಸಿಲ್ಲವಲ್ಲ ಎಂಬೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿರುವ ನಿರ್ದೇಶಕರು, ರೂಲ್ಸ್ ಎಲ್ಲರಿಗೂ ಒಂದೇ, ಯಾರೇ ರೂಲ್ಸ್ ಬ್ರೇಕ್ ಮಾಡಿದರೂ ದಂಡ ವಿಧಿಸಲಾಗುತ್ತೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News