ಶಾಲೆ-ಕಾಲೇಜುಗಳನ್ನು ಆರಂಭಿಸಲು ಯಾವುದೇ ಆತುರ ಇಲ್ಲ: ಸಚಿವ ಶ್ರೀರಾಮುಲು

Update: 2020-10-07 14:45 GMT

ಮೈಸೂರು,ಅ.7: ಶಾಲೆ-ಕಾಲೇಜುಗಳ ಆರಂಭದ ವಿಚಾರದಲ್ಲಿ ಸರ್ಕಾರ ಆತುರ ತೋರುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಹಿನ್ನಲೆಯಲ್ಲಿ ಕೊರೋನ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಬುಧವಾರ ಆಗಮಸಿದ ಅವರು ರಾಜ್ಯದಲ್ಲಿ ಶಾಲಾ ಕಾಲೇಜುಗಳ ಆರಂಭಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 

ಶಾಲೆ- ಕಾಲೇಜುಗಳ ಆರಂಭದ ವಿಚಾರದಲ್ಲಿ ಸರ್ಕಾರ ಆತುರ ತೋರುವುದಿಲ್ಲ. ಶಾಲೆ ಕಾಲೇಜು ಆರಂಭಿಸುವ ವಿಚಾರದಲ್ಲಿ ನನಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತ ಮುಖ್ಯವಾಗಿದೆ. ಈ ಸಂಬಂಧ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಒಂದು ವಾರದೊಳಗೆ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ತಜ್ಞರ ಸಮಿತಿ ನೀಡುವ ವರದಿ ಅಧರಿಸಿ ಶಾಲೆ ಕಾಲೇಜುಗಳ ಆರಂಭದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಲೆ ಆರಂಭಿಸಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ಒಂದು ವಾರದಲ್ಲಿ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಎಲ್ಲಾ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಶಾಲೆ ಆರಂಭಿಸಲು ಯಾವುದೇ ಆತುರ ಇಲ್ಲ. ಮಕ್ಕಳ ಸುರಕ್ಷತೆ ನಮಗೆ ಮುಖ್ಯ. ಪೋಷಕರು ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು. ಶಾಲೆ ಆರಂಭಕ್ಕೂ ಮುನ್ನ ಮಕ್ಕಳು ಪೋಷಕರಿಗೆ ಕೌನ್ಸಿಲಿಂಗ್ ಮಾಡಲಾಗುವುದು ಎಂದರು. 

ಇಡೀ ಭಾರತದಲ್ಲಿ 17 ರಾಜ್ಯಗಳನ್ನು ಗುರುತಿಸಿದ್ದಾರೆ. 17 ರಾಜ್ಯಗಳ 60 ಜಿಲ್ಲೆಗಳಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ವಿಶೇಷವಾಗಿ ಬೆಂಗಳೂರು, ಮೈಸೂರಿನಲ್ಲಿ ಕೊರೋನ ಪ್ರಕರಣ ಹೆಚ್ಚು ಇವೆ. ಸಾವಿನ ಸಂಖ್ಯೆ ಕೂಡ ಮೈಸೂರಲ್ಲಿ ಹೆಚ್ಚುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಸಂಬಂಧ ದೇಶದ 16 ರಾಜ್ಯಗಳು ಹೆಚ್ಚಿನ ನಿಗಾ ವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಪ್ರಧಾನಿಗಳು ಸಲಹೆ ನೀಡಿದ್ದಾರೆ. ಹಾಗಾಗಿ ಇಂದು ಮೈಸೂರು ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ದಸರಾ ಮಹೋತ್ಸವವನ್ನು ಮತ್ತಷ್ಟು ಸರಳವಾಗಿ, ಸುರಕ್ಷಿತವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News