ಬಿಜೆಪಿಯಿಂದ ಡಿಸಿಎಂ ಆಫರ್ ಬಂದಿತ್ತು: ಮಾಜಿ ಸಚಿವ ಜಿ.ಟಿ.ದೇವೇಗೌಡ

Update: 2020-10-07 15:27 GMT

ಬೆಂಗಳೂರು, ಅ.7: ನಾನು ಉಪಮುಖ್ಯಮಂತ್ರಿ ಆಗೋದಾಗಿದ್ರೆ ಬಿಜೆಪಿಯಿಂದ ಆಗಲೇ ಆಗಬಹುದಿತ್ತು. ಮೊದಲೇ ನನಗೆ ಅವರಿಂದ ಆಫರ್ ಬಂದಿತ್ತು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಬುಧವಾರ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಐದು ವರ್ಷ ಅವರೇ ಇರಬೇಕು ಅಂತ ಬಯಸಿದ್ದೆವು. ನಾವೇ ಮುಖ್ಯಮಂತ್ರಿ ಮಾಡಿ ನಾವೇ ಅವರನ್ನು ಇಳಿಸೋಕೆ ಪ್ರಯತ್ನ ಮಾಡ್ತಿದ್ವಾ ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಕುಟುಂಬ ಮತ್ತು ಸ್ನೇಹಿತರು ಸೇರಿ ಒಟ್ಟು 14 ಸಿಬಿಐ ಕಡೆ ರೈಡ್ ಆಗಿತ್ತು. ಮಾಧ್ಯಮಗಳಲ್ಲಿ ದಾಳಿ ಆದ ಸುದ್ದಿ ನೋಡಿದೆ, ನಾನು ಮತ್ತು ಡಿ.ಕೆ.ಶಿವಕುಮಾರ್ ಬಹಳ ವರ್ಷಗಳಿಂದ ಸ್ನೇಹಿತರು. ಅವರ ಶ್ರೀಮತಿ ನಮ್ಮ ಮೈಸೂರು ಜಿಲ್ಲೆಯವರು. ಇಂತಹ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಲು ಬಂದಿದ್ದೇನೆ ಎಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಪ್ರಯತ್ನಿಸಿ, ಶಿವಕುಮಾರ್ ಮುಂಬೈವರೆಗೆ ಹೋಗಿದ್ದರು. ಚುನಾವಣೆ ಸಮಯದಲ್ಲಿ ಈ ರೀತಿ ದಾಳಿ ಮಾಡಿದ್ದು ತಪ್ಪು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ದೇವೇಗೌಡ ಹೇಳಿದರು.

ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ನಿಮಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುವವರು ಚಾಮುಂಡೇಶ್ವರಿ ಕ್ಷೇತ್ರದ ಜನತೆ ಎಂದರು.

ಜಿ.ಟಿ.ದೇವೇಗೌಡರು ನನ್ನನ್ನು ಭೇಟಿಯಾಗಲು ಬಂದಿದ್ದರು. ಕಷ್ಟ ಕಾಲದಲ್ಲಿ ಇಂಥವರೆಲ್ಲಾ ನನ್ನ ಜೊತೆ ನಿಂತಿರೋದು ನನ್ನ ಭಾಗ್ಯ. ರಾಜಕಾರಣ ಬೇರೆ, ಸ್ನೇಹ-ವಿಶ್ವಾಸ ಬೇರೆ. ನಾನು ನೋವಿನಲ್ಲಿದ್ದೇನೆ ಎಂಬುದನ್ನು ಅರಿತು ನನಗೆ ಸಾಂತ್ವನ ಹೇಳಲು ಬಂದಿದ್ದರು ಎಂದ ಡಿ.ಕೆ.ಶಿವಕುಮಾರ್, ನಿರ್ಮಲಾನಂದನಾಥ ಶ್ರೀಗಳ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅದು ಗುರು ಹಾಗೂ ಶಿಷ್ಯರ ನಡುವೆ ನಡೆದ ಸಂಭಾಷಣೆ. ನಾನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News