ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ತಾತ್ಕಾಲಿಕ ವಾಪಸ್

Update: 2020-10-07 16:04 GMT

ಬೆಂಗಳೂರು, ಅ.7: ಆರೋಗ್ಯ ಸಚಿವ ಶ್ರೀರಾಮುಲು ನೀಡಿರುವ ಭರವಸೆ ಹಿನ್ನೆಲೆಯಲ್ಲಿ ಕಳೆದ 14 ದಿನಗಳಿಂದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್.ಯಾಮೋಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಪರವಾಗಿ ಸಚಿವ ಶ್ರೀರಾಮುಲು ಹಾಗೂ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಮಂಗಳವಾರ ನಡೆಸ ಸಭೆಯಲ್ಲಿ ಕೆಲವು ಪ್ರಮುಖ ಬೇಡಿಕೆಗಳ ಮೇಲೆ ಆದೇಶಗಳನ್ನು ಹೊರಡಿಸಿ, ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು: ಸಂಘದ ಅಧಿಕೃತ ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನವನ್ನು ಪಾವತಿಸಲು ಒಪ್ಪಲಾಗಿದೆ. ಮತ್ತು ಮುಷ್ಕರದ ಸಮಯದಲ್ಲಿ ಕೆಲವರನ್ನು ಸೇವೆಯಿಂದ ವಜಾಗೊಂಡಿರುವ ಬಗ್ಗೆ ನೋಟಿಸ್ ನೀಡಿರುವುದನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.

-ಕೊರೋನ ಸಂದರ್ಭದಲ್ಲಿ ಮೃತಪಟ್ಟ ಇಲಾಖಾ ಗುತ್ತಿಗೆ, ಹೊರಗುತ್ತಿಗೆ ನೌಕರರ ಕುಟುಂಬಗಳಿಗೆ 50ಲಕ್ಷ ರೂ.ಪರಿಹಾರ ಮತ್ತು ಕೇಂದ್ರ ಸರಕಾರದ ವಿಮೆ ಆಗದಿದ್ದರೆ 30 ಲಕ್ಷ ರೂ.ಪರಿಹಾರವನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಇತರೆ ಸೌಲಭ್ಯಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

-ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ವೇತನವನ್ನು ನೀಡಲು ಅಗತ್ಯ ಕ್ರಮ ವಹಿಸುವುದು. ಹಾಗೂ ಸರಕಾರಿ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಆ ದಿನದ ಪರ್ಯಾಯ ರಜೆಯನ್ನು ಇಲ್ಲವೇ ವೇತನ ನೀಡಬೇಕು. ಅಸ್ಸಾಂ ಮಾದರಿಯಲ್ಲಿ 60 ವರ್ಷದವರೆಗೆ ಸೇವಾ ಭದ್ರತೆಯನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

-ಸಮಾನ ಕೆಲಸಕ್ಕೆ ಸಮಾನ ವೇತನ, ಎಚ್‍ಆರ್ ಪಾಲಿಸಿ ಹಾಗೂ 14 ಬೇಡಿಕೆಗಳಲ್ಲಿ ಉಳಿದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಗಾಗಲೇ ರಚಿಸಿರುವ ಸಮಿತಿಯ ಮೂಲಕ ಪರಿಹರಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ನನ್ನ ಮನವಿಗೆ ಸ್ಪಂದಿಸಿ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಅವರ ಬೇಡಿಕೆಗಳಿಗೆ ಸರಕಾರ ಪೂರಕವಾಗಿ ಸ್ಪಂದಿಸಲಿದೆ.

-ಶ್ರೀರಾಮುಲು, ಆರೋಗ್ಯ ಸಚಿವ

ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸರಕಾರ ನೀಡಿರುವ ಒಂದು ತಿಂಗಳ ಗಡುವಿನ ಭರವಸೆಯ ಹಿನ್ನೆಲೆಯಲ್ಲಿ ಎಲ್ಲ ನೌಕರರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲು ರಾಜ್ಯ ಸಮಿತಿಯು ಒಮ್ಮತದ ನಿರ್ಣಯ ಮಾಡಿದೆ.

-ವಿಶ್ವಾರಾಧ್ಯ ಎಚ್. ಯಾಮೋಜಿ, ಅಧ್ಯಕ್ಷ

ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News