ಮಾಸ್ಕ್ ಧರಿಸದವರಿಂದ ದಂಡ ವಸೂಲಿ: ಸಾರ್ವಜನಿಕರಿಂದ ಭಾರೀ ವಿರೋಧ

Update: 2020-10-07 17:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.7: ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲು ಮಾರ್ಷಲ್‍ಗಳ ಜೊತೆಗೆ ಪೊಲೀಸರು ಬುಧವಾರ ಫೀಲ್ಡ್‍ಗೆ ಇಳಿಯುತ್ತಿದ್ದಂತೆಯೇ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಸರಕಾರ ಮೊದಲು ಕೊರೋನ ನಿಯಂತ್ರಣ ಮಾಡಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಏಕಾಏಕಿ ಹಣ ವಸೂಲಿಗಿಳಿದರೆ ಅದು ಹಗಲು ದರೋಡೆಯಾಗುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ.ದಂಡ ವಿಧಿಸಲು ಆದೇಶಿಸಿ ಮಾರ್ಷಲ್‍ಗಳನ್ನು ನೇಮಿಸಿತ್ತು. ಬುಧವಾರ ಪೊಲೀಸರಿಗೂ ದಂಡ ವಸೂಲಿಗೆ ಆದೇಶಿಸಿದ ಬೆನ್ನಲ್ಲೇ ಪೊಲೀಸರು ಹಾಗೂ ಮಾರ್ಷಲ್‍ಗಳು ನಗರದ ವಿವಿಧ ಪ್ರದೇಶಗಳಲ್ಲಿ  ಕಾರ್ಯಾಚರಣೆ ನಡೆಸಿ ಮಾಸ್ಕ್ ಹಾಕದ ಪ್ರತಿಯೊಬ್ಬರಿಂದಲೂ 1 ಸಾವಿರ ರೂ.ದಂಡ ವಸೂಲಿ ಮಾಡಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಮಾಸ್ಕ್ ಸರಿಯಾಗಿ ಹಾಕಬೇಕೆಂಬ ಕಾನೂನು ಏನಾದರೂ ಇದೆಯೇ ಎಂದು ಪ್ರಶ್ನಿಸಿದರು. ಮತ್ತೊಬ್ಬರು ಪೊಲೀಸರು ನಮ್ಮಿಂದ 1 ಸಾವಿರ ರೂ.ದಂಡ ವಸೂಲಿ ಮಾಡಿದ್ದಾರೆ. ಪ್ರತಿ ದಿನ ನಾನು 400 ರೂ.ದುಡಿಯುತ್ತೇನೆ. ಈಗ ಪೊಲೀಸರು 1 ಸಾವಿರ ರೂ.ದಂಡ ವಸೂಲಿ ಮಾಡಿ, ನನ್ನ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸರಕಾರ ಕೊರೋನ ನಿಯಂತ್ರಣ ಮಾಡಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಟಿವಿ, ರೇಡಿಯೋ, ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ಮಾಸ್ಕ್ ಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಅದನ್ನು ಬಿಟ್ಟು ಈ ರೀತಿ ವಸೂಲಿಗಿಳಿದರೆ ಅದು ಹಗಲು ದರೋಡೆಯಾಗುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲ ಸಂಗತಿಗಳು ರಾಜ್ಯ ಸರಕಾರದ ಗಮನಕ್ಕೆ ಬರುತ್ತಿದ್ದಂತೆಯೇ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದ ಪ್ರಮಾಣ ನಗರದ ಪ್ರದೇಶದಲ್ಲಿ 1 ಸಾವಿರ ರೂ.ಬದಲಿಗೆ 250 ರೂ., ಗ್ರಾಮೀಣ ಪ್ರದೇಶದಲ್ಲಿ 500 ರೂ.ಬದಲಿಗೆ 100 ರೂ.ಗಳಿಗೆ ಇಳಿಸಲು ತೀರ್ಮಾನಿಸಲಾಯಿತು. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News