ಸಿಬಿಐ ದಾಳಿ ಖಂಡಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2020-10-08 12:03 GMT

ಮಡಿಕೇರಿ ಅ.8 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. 

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಸರ್ಕಾರ ಚುನಾವಣೆ ಸಮೀಪಿಸುವಾಗಲೆಲ್ಲ ಹತಾಶ ಮನೋಭಾವದಿಂದ ಇಡಿ ಮತ್ತು ಸಿಬಿಐ ದಾಳಿಯ ಬಲ ಪ್ರಯೋಗ ಮಾಡುತ್ತಿದೆ ಎಂದು ಟೀಕಿಸಿದರು. ಅಭಿವೃದ್ಧಿ ಸಾಧಿಸಲಾಗದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕಾನೂನಿನ ಅರಿವಿಲ್ಲದ ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿರುವುದು ಖಂಡನೀಯವೆಂದರು.

ಕಾಂಗ್ರೆಸ್ ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಸರ್ಕಾರ ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ಮತ್ತು ಇಡಿ ಮೂಲಕ ದಾಳಿ ಮಾಡಿಸಿದೆ. ಸರ್ಕಾರ ದ್ವೇಷದ ರಾಜಕರಣ ಮಾಡುತ್ತಿದ್ದರೆ, ಸಿಬಿಐ ಅಧಿಕಾರಿಗಳು ಕೇಂದ್ರ ಸರ್ಕಾರದ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ ಮಾಧ್ಯಮ ಸಂಸ್ಥೆಯನ್ನೇ ಮುಚ್ಚಿಸಿರುವುದು ಸರ್ವಾಧಿಕಾರ ಧೋರಣೆಗೆ ಸಾಕ್ಷಿಯಾಗಿದೆ. ಕೋವಿಡ್ ಅವ್ಯವಹಾರವನ್ನು ಮುಚ್ಚಿ ಹಾಕುವ ಯತ್ನವಾಗಿ ದಾಳಿ ನಡೆಸಲಾಗಿದೆ ಎಂದು ಟೀಕಿಸಿದ ಮಂಜುನಾಥ್ ಕುಮಾರ್, ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿರುವ ಬಿಜೆಪಿ ಸರ್ಕಾರ ತನ್ನ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವೆಂಕಪ್ಪಗೌಡ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಸಿಬಿಐ ದಾಳಿಯ ನೆಪದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಈ ರೀತಿಯ ಕ್ಷುಲ್ಲಕ ರಾಜಕಾರಣವನ್ನು ಸಮರ್ಥವಾಗಿ ಎದುರಿಸಲಿದೆ ಎಂದರು. 

ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಉಪಚುನಾವಣೆ ಘೋಷಣೆಯಾದ ನಂತರ ಸೋಲಿನ ಭೀತಿಯಲ್ಲಿರುವ ಬಿಜೆಪಿ ಕೀಳುಮಟ್ಟದ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು. 

ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಉಪಾಧ್ಯಕ್ಷ ಚೆರಿಯಪಂಡ ಸನ್ನಿ ಕುಶಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಶಿವುಮಾದಪ್ಪ, ಕುಶಾಲನಗರ ವೀಕ್ಷಕ ಪ್ರದೀಪ್ ರೈ ಪಂಬಾರು, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಪೊನ್ನಂಪೇಟೆ ಅಧ್ಯಕ್ಷ ಮೀದೆರಿರ ನವೀನ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ನಗರಾಧ್ಯಕ್ಷ ಆರ್.ಪಿ.ಚಂದ್ರಶೇಖರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನ, ಡಿಸಿಸಿ ಸದಸ್ಯ ಬಾಲಚಂದ್ರ ನಾಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಮ್ಮಡ ಸೋಮಣ್ಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್, ಡಿಸಿಸಿ ಖಜಾಂಚಿ ಹೆಚ್.ಎಂ.ನಂದಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಜಿ.ಪಂ ಸದಸ್ಯರುಗಳಾದ ಪಂಕಜ, ಸರಿತಾಪೂಣಚ್ಚ, ಕುಮುದಾ ಧರ್ಮಪ್ಪ, ಸುನೀತ, ಕೆಪಿಸಿಸಿ ಸದಸ್ಯ ನಟೇಶ್ ಗೌಡ, ಎಸ್.ಸಿ. ಘಟಕದ ಮಾಜಿ ಅಧ್ಯಕ್ಷ ಚಂದ್ರ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾಮುದ್ದಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಗರಾಧ್ಯಕ್ಷೆ ಪಾರ್ವತಿ ಫ್ಯಾನ್ಸಿ, ಐಎನ್‍ಟಿಯುಸಿ ನಗರಾಧ್ಯಕ್ಷ ಮಾಥ್ಯು, ಪ್ರಮುಖರಾದ ಪುಷ್ಪಾಪೂಣಚ್ಚ, ಮುದ್ದುರಾಜು, ಪ್ರಕಾಶ್ ಆಚಾರ್ಯ, ವೆಂಕಟೇಶ್, ಜಗದೀಶ್, ಗಿಲ್ಬರ್ಟ್ ಲೋಬೊ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News