ಬೀಟೆ ಮರ ಅಕ್ರಮ ಸಾಗಾಟ: ಬಿರುನಾಣಿಯಲ್ಲಿ ಮಾಲು ಸಹಿತ ಓರ್ವನ ಬಂಧನ

Update: 2020-10-08 12:05 GMT

ಮಡಿಕೇರಿ ಅ.8 : ವೀರಾಜಪೇಟೆ ತಾಲೂಕಿನ ಬಿರುನಾಣಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಬೀಟೆ ಮರ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಿರುನಾಣಿ ಗ್ರಾಮದ ನಿವಾಸಿ ಮಧು ಎಂಬುವವರ ತೋಟದಲ್ಲಿ ಬಿದ್ದಿದ್ದ  ಬೀಟೆ ಮರವನ್ನು  ನಾಟಾಗಳನ್ನಾಗಿ ಮಾಡಿ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆ ಡಿಸಿಐಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ  ನಡೆಸಿ ಉಳಿದಿದ್ದ  ಅಂದಾಜು 1 ಲಕ್ಷ  ಮೌಲ್ಯದ  5 ಬೀಟೆ ನಾಟಾಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕುಟ್ಟ ಪೂಜೆಕಲ್ಲು ನಿವಾಸಿ ಕುಂಞಪು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ತೋಟದ ಮಾಲಕ ಕುಪ್ಪಣಮಾಡ ರವೀಂದ್ರ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

ಬಿರುನಾಣಿ ವ್ಯಾಪ್ತಿಯಲ್ಲಿ ನಿರಂತರವಾಗಿ ಬೆಲೆ ಬಾಳುವ  ಮರಗಳ ಅಕ್ರಮ ಸಾಗಾಟ ನಡೆಯುತ್ತಿರುವ ಬಗ್ಗೆ ಶಂಕೆಯಿದ್ದು, ಈ ಬಗ್ಗೆ ಇಲಾಖೆ ತೀವ್ರ ನಿಗಾ ಇರಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಪೊಲೀಸ್ ಉಪ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್, ಎಎಸ್‍ಐ ಕೆ.ವೈ.ಹಮೀದ್ ಸಿಬ್ಬಂದಿಗಳಾದ ಕೆ.ಎಸ್.ಅನಿಲ್ ಕುಮಾರ್,  ವಿ.ಜಿ. ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎನ್. ನಿರಂಜನ್, ಬಿ.ಜೆ.ಶರತ್ ರೈ, ಸುರೇಶ್  ಹಾಗೂ ಚಾಲಕ ಕೆ.ಎಸ್. ಶಶಿಕುಮಾರ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.  ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News