ಲಘುವಾಗಿ ಮಾತನಾಡುವವರಿಗೆ ಚುನಾವಣೆ ಬಳಿಕ ಉತ್ತರ ಕೊಡುತ್ತೇವೆ: ಎಚ್.ಡಿ.ದೇವೇಗೌಡ

Update: 2020-10-08 13:27 GMT

ಕಲಬುರ್ಗಿ, ಅ.8: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಂದೆಯನ್ನು ಅನುಸರಿಸಿ ಅಳುತ್ತಿದ್ದಾರೆ ಎಂಬ ಹೇಳಿಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಈಗ ನಾನು ಉತ್ತರಿಸಲು ಹೋಗುವುದಿಲ್ಲ. ಚುನಾವಣೆ ಬಳಿಕ ಈ ಎಲ್ಲ ಆರೋಪಗಳಿಗೂ ಉತ್ತರ ಕೊಡುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಕಲಬುರ್ಗಿ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ನಮ್ಮ ಪಕ್ಷದಲ್ಲಿಯೇ ಬೆಳೆದು ಬೇರೆ ಪಕ್ಷಕ್ಕೆ ಸೇರಿಕೊಂಡು ನಮ್ಮ ಬಗ್ಗೆ ಆರೋಪ ಮಾಡುತ್ತಿರುವ ಎಲ್ಲ ವಿಚಾರಗಳೂ ನನ್ನ ಗಮನಕ್ಕೆ ಬಂದಿದೆ. ಕೊರೋನ ತಡೆಗಟ್ಟುವುದನ್ನು ಬಿಟ್ಟು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ರಾಜಕೀಯ ಕೆಸರು ಎರೆಚಾಟ ನಡೆಸಿವೆ. ಈ ಎಲ್ಲ ಸಂಗತಿಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. 

ಜೆಡಿಎಸ್ ಶಕ್ತಿ ಕಡಿಮೆಯಾಗಿದ್ದರೂ ಪಕ್ಷದ ಕಾರ್ಯಕರ್ತರು ಸದಾ ನಮ್ಮ ಜೊತೆಗಿದ್ದಾರೆ. ಪಕ್ಷ ಸಂಘಟನೆ, ಪಕ್ಷ ಮುನ್ನಡೆಸೋದೆ ನಮ್ಮ ಗುರಿಯಾಗಿದೆ. ನಾನು ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. 1970ರಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸುವುದಷ್ಟೇ ಮುಖ್ಯ ಎಂದರು. 

ಏಕಾಂಗಿ ಸ್ಪರ್ಧೆ: ವಿಧಾನಸಭೆ, ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದೇವೆ ಎಂದರು. 

ನ್ಯಾಯಮಂಡಳಿ ರಚನೆ ಅಗತ್ಯವಿಲ್ಲ
ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ ಮತ್ತೊಂದು ನ್ಯಾಯಮಂಡಳಿ ರಚಿಸುವ ಅಗತ್ಯವಿಲ್ಲ. ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತೇನೆ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News