ಬಿಜೆಪಿ ಸರಕಾರದ ತಾರತಮ್ಯ ನೀತಿ ಖಂಡಿಸಿ ಉಪವಾಸ ಸತ್ಯಾಗ್ರಹ: ಶಾಸಕ ಟಿ.ಡಿ.ರಾಜೇಗೌಡ

Update: 2020-10-08 14:40 GMT

ಚಿಕ್ಕಮಗಳೂರು, ಅ.8: ರಾಜ್ಯ ಸರಕಾರದ ತಾರತಮ್ಯ ಧೋರಣೆ ಮತ್ತು ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸದೇ ಬಫರ್ ಜೋನ್ಹ್, ಇಕೋ ಸೆನ್ಸ್ ಟಿವ್ ಝೋನ್ ನಿರ್ಮಿಸಲು ಮುಂದಾಗಿರುವ ಸರಕಾರದ ಕ್ರಮವನ್ನು ವಿರೋಧಿಸಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಕೊಪ್ಪ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕನಾಗಿ ಎರಡುವರೆ ವರ್ಷ ಕಳೆದಿದೆ. ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನವನ್ನು ಅಂದಿನ ಸರಕಾರ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗಿದೆ. ಈ ಅನುದಾನದಲ್ಲಿ ಅನೇಕ ಕಾಮಗಾರಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಕೆಲ ಕಾಮಗಾರಿಗಳ ಇಎಂಡಿ ಕಟ್ಟಲಾಗಿದೆ. ಕೆಲವು ಕಾಮಗಾರಿಗಳ ಪ್ರಾರಂಭಕ್ಕೆ ಆದೇಶವನ್ನು ನೀಡಲಾಗಿದೆ. ಕೆಲ ಕಾಮಗಾರಿಗಳು ಪ್ರಾರಂಭಗೊಂಡಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸಗಳನ್ನು ತಡೆಯುವ ಕೀಳುಮಟ್ಟದ ರಾಜಕಾರಣವನ್ನು ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸದೇ ಬಫರ್ ಜೋನ್ ಮತ್ತು ಇಕೋ ಸೆನ್ಸೆಟಿವ್ ಝೋನ್ ಹಾಗೂ ಮೀಸಲು ಅರಣ್ಯ, ವನ್ಯಜೀವಿ ಪ್ರದೇಶ ಘೋಷಣೆಗೆ ಸರಕಾರ ಮುಂದಾಗಿದೆ. ಇದರಿಂದ ನೂರಾರು ವರ್ಷಗಳ ಕಾಲದಿಂದ ಬದುಕು ಕಟ್ಟಿಕೊಂಡಿದ್ದ ಜನರಿಗೆ ತೊಂದರೆಯಾಗಲಿದೆ. ಈ ಎಲ್ಲಾ ಅಂಶಗಳ ಮೇಲೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಶುಕ್ರವಾರ ಕೊಪ್ಪ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News