ಟಿಕೆಟ್ ಹಂಚಿಕೆ ಬಗ್ಗೆ ಗೊಂದಲಗಳಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಅ.8: ಶಿರಾ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಷಡಕ್ಷರಿ, ಜಯಚಂದ್ರ ಎಲ್ಲರೂ ಒಟ್ಟಾಗಿ ಗೆಲುವಿನ ಕಡೆಗೆ ಶ್ರಮಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ವದಂತಿಗಳಿಗೆ ಕಿವಿಗೊಟ್ಟು ಪಕ್ಷದ ಕಾರ್ಯಕರ್ತರು ವಿಚಲಿತರಾಗಬೇಕಾದ ಅಗತ್ಯವಿಲ್ಲ ಎಂದರು.
ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಂದೆ-ತಾಯಿ ಒಪ್ಪಲಿ, ಒಪ್ಪದೆ ಇರಲಿ ಯಾವುದೇ ಕಾರಣಕ್ಕೂ ಶಾಲೆ, ಕಾಲೇಜುಗಳನ್ನು ಪುನರಾರಂಭಿಸಬಾರದು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆಯುತ್ತೇನೆ ಎಂದು ಅವರು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಈ ವರ್ಷ ಮುಂದಿನ ತರಗತಿಗೆ ಭಡ್ತಿ ಕೊಡಲಿ, ಇದರಿಂದ ಏನೂ ಕಳೆದುಕೊಳ್ಳುವುದಿಲ್ಲ, ಆಕಾಶ ಏನು ಬೀಳುವುದಿಲ್ಲ. ಬೇಕಿದ್ದರೆ ಆನ್‍ಲೈನ್‍ನಲ್ಲಿ ಪಾಠಗಳನ್ನು ಮಾಡಲಿ. ಶಾಲೆಗಳನ್ನು ತೆರೆಯಬಾರದು ಎಂದು ಮಾಧ್ಯಮಗಳು ನಡೆಸುತ್ತಿರುವ ಅಭಿಯಾನವನ್ನು ಇನ್ನು ಹೆಚ್ಚು ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.