ಆರೋಗ್ಯ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಳವಾಗಲಿ

Update: 2020-10-09 06:38 GMT

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವ ಮಾತೊಂದಿದೆ. ಮೊಳಕೆ ಆರೋಗ್ಯವಾಗಿದ್ದರೆ, ಗಿಡವೂ ಆರೋಗ್ಯವಾಗಿ ಬೆಳೆಯುತ್ತದೆ ಎಂಬರ್ಥದಲ್ಲಿ ಈ ಮಾತನ್ನು ಬಳಸಲಾಗುತ್ತದೆ. ಬಾಲ್ಯದಲ್ಲಿ ಮಗುವಿನ ಆರೋಗ್ಯ ಸ್ಥಿತಿ ಅದರ ಭವಿಷ್ಯವನ್ನು ನಿರ್ಣಯಿಸುತ್ತದೆ. ಆದುದರಿಂದಲೇ, ಒಂದು ಮಗುವಿನ ಆರೈಕೆ ತಾಯಿಯ ಗರ್ಭದಿಂದಲೇ ಆರಂಭವಾಗಬೇಕು. ಭಾರತ ಯುವಕರಲ್ಲಿ ಪ್ರತಿಭೆಗಳನ್ನು ಹುಡುಕುತ್ತದೆ. ಯಾವುದೇ ಪ್ರತಿಭೆ ಏಕಾಏಕಿ ಹುಟ್ಟುವುದಿಲ್ಲ. ಅದಕ್ಕೆ ಬಾಲ್ಯದಿಂದ ಬೇಕಾದ ಪೋಷಣೆಗಳು ಸಿಗಬೇಕು. ಬಾಲ್ಯದಿಂದ ಪೌಷ್ಟಿಕಾಂಶವಿರುವ ಆಹಾರ ಪದಾರ್ಥವನ್ನು ಸೇವಿಸಿ, ಸರಿಯಾದ ತರಬೇತಿಗಳನ್ನು ಪಡೆದವರು ಭವಿಷ್ಯದಲ್ಲಿ ಯಶಸ್ವಿ ಕ್ರೀಡಾಳುಗಳಾಗಬಹುದು ಹೊರತು, ಹದಿಹರೆಯಕ್ಕೆ ಕಾಲಿಟ್ಟ ಬಳಿಕ, ಏಕಾಏಕಿ ಅವರಲ್ಲಿ ಪ್ರತಿಭೆಗಳನ್ನು ಹುಡುಕಿದರೆ ಇದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಬಹುದು. ಈ ನಿಟ್ಟಿನಲ್ಲಿ, ತನ್ನ ಜನರ ಆರೋಗ್ಯಕ್ಕಾಗಿ ನೀಡುವ ಕೊಡುಗೆಯೇ ಆ ದೇಶದ ಆರೋಗ್ಯವಂತ ಭವಿಷ್ಯವನ್ನು ನಿರ್ಣಯಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದುರದೃಷ್ಟಕ್ಕೆ, ಆರೋಗ್ಯಪಾಲನೆಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತವು ಅತ್ಯಂತ ಕಳಪೆ ಸ್ಥಾನದಲ್ಲಿರುವುದನ್ನು ಹಲವಾರು ಅಂತರ್‌ರಾಷ್ಟ್ರೀಯ ಸಮೀಕ್ಷೆಗಳು ಬಹಿರಂಗಪಡಿಸಿವೆ.

ಕೊರೋನದ ಈ ದಿನಗಳಲ್ಲಂತೂ ಜನರು ತಮ್ಮ ಆರೋಗ್ಯಕ್ಕಾಗಿ ಮನೆಮಠಗಳನ್ನೂ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಒಂದು ಮಾರಕ ರೋಗ, ಆರ್ಥಿಕವಾಗಿ ಸದೃಢವಾಗುವ ಹಂತದಲ್ಲಿರುವ ಕುಟುಂಬವನ್ನು ಏಕಾಏಕಿ ಬಡತನಕ್ಕೆ ತಳ್ಳಿಬಿಡುವಂತಹ ಸ್ಥಿತಿ ದೇಶದಲ್ಲಿದೆ. ದೇಶದೆಲ್ಲೆಡೆ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ಅದಕ್ಷತೆ ಜನಸಾಮಾನ್ಯರನ್ನು ಚಿಕಿತ್ಸೆಗಾಗಿ ಅನಿವಾರ್ಯವಾಗಿ ದುಬಾರಿಯಾದ ಖಾಸಗಿ ಆಸ್ಪತ್ರೆಗಳ ಮೊರೆಹೋಗುವಂತೆ ಮಾಡಿದೆ. ಖಾಸಗಿ ಆಸ್ಪತ್ರೆಗಳು ದೋಚುವುದಕ್ಕಾಗಿಯೇ ಕುಖ್ಯಾತಿಯನ್ನು ಪಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ವಿಮೆ ಬಡವರಿಗೆ ನೆರವಾಗುತ್ತದೆಯಾದರೂ, ಈ ವಿಮೆಯನ್ನೂ ಖಾಸಗಿ ಆಸ್ಪತ್ರೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಈ ದೇಶದ 50 ಕೋಟಿಗೂ ಅಧಿಕ ಕಡುಬಡವರು ತಮ್ಮನ್ನು ಕಾಡುವ ರೋಗಗಳ ತಪಾಸಣೆ ಅಥವಾ ಚಿಕಿತ್ಸೆಗೆ ಬೇಕಾಗುವ ವೆಚ್ಚವನ್ನು ಭರಿಸಲು ಅಶಕ್ತರಾಗಿದ್ದಾರೆ. ಒಂದು ವೇಳೆ ಅವರು ರೋಗಪರೀಕ್ಷೆಗೊಳಗಾದರೂ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆಯಲು ಅವರಿಗೆ ಸಾಧ್ಯವಾಗದು. ಸರಕಾರಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆಯನ್ನು ಒದಗಿಸುತ್ತವೆಯಾದರೂ ಅವುಗಳ ಗುಣಮಟ್ಟ ಪಾತಾಳಕ್ಕಿಳಿದಿದೆ ಹಾಗೂ ಭ್ರಷ್ಟಾಚಾರಗಳು ಅಲ್ಲಿ ರಾಜಾರೋಷವಾಗಿ ತಾಂಡವವಾಡುತ್ತಿವೆ. ಹೃದಯನಾಳದ ರೋಗಗಳು, ಕ್ಯಾನ್ಸರ್, ಉಸಿರಾಟದ ತೊಂದರೆ, ದೀರ್ಘಕಾಲೀನ ಮಧುಮೇಹದಂತಹ ಸೋಂಕುರಹಿತ ರೋಗಗಳನ್ನು ನಿಭಾಯಿಸುವಲ್ಲಿ ಸೌಲಭ್ಯಗಳ ಕೊರತೆ ದೇಶದ ಸಾರ್ವಜನಿಕ ಆರೋಗ್ಯ ವಲಯವು ಎದುರಿಸುತ್ತಿರುವ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ.

ಸಾಂಕ್ರಾಮಿಕರೋಗಗಳು ವ್ಯಕ್ತಿಯನ್ನು ಆತ ಸೋಂಕಿಗೊಳಗಾದ ಕೆಲವೇ ದಿನಗಳೊಳಗೆ ಅಸ್ವಸ್ಥಗೊಳಿಸುತ್ತವೆ. ಆದರೆ ಸಾಂಕ್ರಾಮಿಕವಲ್ಲದ ರೋಗಗಳು ಅದರಲ್ಲೂ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಅಥವಾ ಕುರುಡುತನದಂತಹ ರೋಗಗಳು ಸಾಮಾನ್ಯವಾಗಿ ಅವು ಉಲ್ಬಣಿಸಿದಾಗಲೇ ಪತ್ತೆಯಾಗುತ್ತವೆ. ಇಂತಹ ಕಾಯಿಲೆಗಳ ಚಿಕಿತ್ಸೆಗೆ ತಜ್ಞ ವೈದ್ಯರ ಅಗತ್ಯವಿರುತ್ತದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಂತೂ ಅವರ ಸಂಖ್ಯೆ ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿದೆ. ಹೀಗಾಗಿ ದೂರದ ಗ್ರಾಮೀಣ ಭಾಗದಲ್ಲಿರುವವರು ದೂರದ ನಗರ ಪ್ರದೇಶಗಳಲ್ಲಿರುವ ತಜ್ಞ ವೈದ್ಯರ ಬಳಿ ಹಲವಾರು ಬಾರಿ ಚಿಕಿತ್ಸೆಗೆ ತೆರಳಬೇಕಾಗುತ್ತದೆ. ಹೀಗಾಗಿ ಈ ರೀತಿಯ ಕಾಯಿಲೆಗಳು ಬಾಧಿಸಿದಲ್ಲಿ ಅವುಗಳಿಗೆ ಮಾಡುವ ದುಬಾರಿ ಚಿಕಿತ್ಸಾ ವೆಚ್ಚವು ಅವರ ಬದುಕನ್ನೇ ಜರ್ಝರಿತಗೊಳಿಸುತ್ತದೆ.

ಈ ಎಲ್ಲಾ ಸಮಸ್ಯೆಗಳ ನಡುವೆ ಸಾಮುದಾಯಿಕವಾದ ಆರೋಗ್ಯ ಸೇವಾ ವ್ಯವಸ್ಥೆಗಳು ಆಶಾಕಿರಣವಾಗಿ ಕಂಡು ಬರುತ್ತವೆ. ದುರ್ಗಮವಾದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತವಾದ ಹಾಗೂ ಮಿತದರದ ಆರೋಗ್ಯಪಾಲನೆಯನ್ನು ಒದಗಿಸಲು ಸಾಮುದಾಯಿಕ ಆರೋಗ್ಯಪಾಲನಾ ಪದ್ಧತಿಯು ಹೆಚ್ಚು ಸಹಕಾರಿಯಾಗಿದೆ. ಗ್ರಾಮೀಣ ಆರೋಗ್ಯ ಕಾರ್ಯಕರ್ತರು ಗರ್ಭಿಣಿಯರ ಪಾಲನೆ, ಶಿಶುಗಳಿಗೆ ರೋಗ ನಿರೋಧಕ ಲಸಿಕೆ ನೀಡುವಿಕೆ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಾರೆ ಮತ್ತು ಸರಕಾರದಿಂದ ದೊರೆಯುವ ಆರೋಗ್ಯ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುತ್ತಾರೆ. ಮಾತ್ರವಲ್ಲದೆ ಸ್ವಸಹಾಯ ಸಂಘಗಳ ಮೂಲಕ ಸಹಕಾರಿ ಆರೋಗ್ಯ ಸುರಕ್ಷತಾ ಯೋಜನೆಗಳ ಅನುಷ್ಠಾನದಲ್ಲೂ ಕೈಜೋಡಿಸುತ್ತಾರೆ.

ಈ ಆರೋಗ್ಯ ಕಾರ್ಯಕರ್ತರಿಗೆ ವೈದ್ಯಕೀಯ ಶಿಕ್ಷಣದ ಬಗ್ಗೆ ಹೆಚ್ಚು ಜ್ಞಾನವಿರಲಾರದು. ಆದರೆ ಅವರಿಗೆ ಜನಸಾಮಾನ್ಯರೊಂದಿಗೆ ಅದರಲ್ಲೂ ವಿಶೇಷವಾಗಿಅನಕ್ಷರಸ್ಥರು, ದುರ್ಬಲರು ಹಾಗೂ ಬಡ ಗ್ರಾಮೀಣ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕೆಂಬುದು ಚೆನ್ನಾಗಿ ಅರಿವಿದೆ. ಇದರ ಜೊತೆಗೆ ಸಹಕಾರಿ ಆರೋಗ್ಯ ಸೇವಾ ವ್ಯವಸ್ಥೆ ಕೂಡಾ ದುರ್ಬಲ ವರ್ಗಗಳಿಗೆ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಯೋಜನಕರವಾಗಿದೆ. ಸಮುದಾಯಗಳು ಹಾಗೂ ಜನರು ತಮ್ಮ ಆರೋಗ್ಯಪಾಲನೆಯ ಉಸ್ತುವಾರಿಯನ್ನು ತಾವೇ ನೋಡಿಕೊಳ್ಳುವಂತಹ ಈ ಸಹಕಾರಿ ಆರೋಗ್ಯ ವ್ಯವಸ್ಥೆಯು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದರ ಜೊತೆಗೆ ಪಾರಂಪರಿಕ ಔಷಧ ಪದ್ಧತಿ ಹಾಗೂ ಸ್ಥಳೀಯ ರೋಗ ಉಪಶಮನಕಾರಕ ಸಸ್ಯಗಳ ಬಳಕೆಯ ಮೂಲಕ ರೋಗ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲೂ ಸಾಧ್ಯವಿದೆ.

ಆಶಾ ಕಾರ್ಯಕರ್ತೆಯರು, ಸಹಾಯಕ ನರ್ಸ್, ಪ್ರಸೂತಿದಾದಿ (ಮಿಡ್‌ವೈಫ್) ಯರು ಸೇರಿದಂತೆ ಸಾಮುದಾಯಿಕ ಆರೋಗ್ಯ ಕಾರ್ಯಕರ್ತೆಯರು ನಿಜಕ್ಕೂ ನಮ್ಮ ಸಾರ್ವಜನಿಕ ಆರೋಗ್ಯ ಪಾಲನಾ ವ್ಯವಸ್ಥೆಯ ಆಧಾರಸ್ತಂಭವಾಗಿದ್ದಾರೆ. ಆ ಮೂಲಕ ಬಾಣಂತಿಯರು ಹಾಗೂ ಮಗುವಿನ ಸಾವಿನ ಪ್ರಮಾಣವನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಲೂ ಭಾರತದಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋಗದೆ ತಮ್ಮ ಊರುಗಳಲ್ಲೇ ಉಳಿದುಕೊಂಡಿರುವ ಗಣನೀಯ ಸಂಖ್ಯೆಯ ವೃದ್ಧರು ಹಾಗೂ ಮಹಿಳೆಯರ ಬೃಹತ್ ಜನಸಂಖ್ಯೆಯಿರುವ ಅತ್ಯಂತ ದುರ್ಗಮವಾದ ಪ್ರದೇಶಗಳಲ್ಲಿ ಇಂತಹ ಬರಿಗಾಲ ವೈದ್ಯರ ನಿಯೋಜನೆ ಸಾಧ್ಯವಾದಲ್ಲಿ ಅದು ಅತ್ಯಂತ ಪರಿಣಾಮಕಾರಿಯಾಗಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಆರೋಗ್ಯಪಾಲನಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಸಾಧ್ಯವಿದೆ.

ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯಕರ ಜಗತ್ತನ್ನು ನಿರ್ಮಿಸಲು ಸರಕಾರವು ವೃತ್ತಿಪರ ವೈದ್ಯರ ಸಹಭಾಗಿತ್ವದೊಂದಿಗೆ ಸದೃಢವಾದ ಆರೋಗ್ಯ ನೀತಿಯನ್ನು ರೂಪಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಎಲ್ಲಾ ವರ್ಗದ ಜನರು ಭರಿಸಲು ಸಾಧ್ಯವಾಗುವಂತಹ ವಿಶ್ವಸನೀಯ ಹಾಗೂ ದಕ್ಷತೆಯಿಂದ ಕೂಡಿದ ಆರೋಗ್ಯಪಾಲನಾ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಸಾಕಾರಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News