ಕಸ್ತೂರಿರಂಗನ್ ವರದಿ ಜಾರಿ ಕುರಿತು ಕೇಂದ್ರಕ್ಕೆ ರಾಜ್ಯ ಸರಕಾರ ಮನವರಿಕೆ ಮಾಡಲಿ: ಶಾಸಕ ದಿನೇಶ್ ಗುಂಡೂರಾವ್

Update: 2020-10-08 17:49 GMT

ಬೆಂಗಳೂರು, ಅ.8: ಕಸ್ತೂರಿರಂಗನ್ ವರದಿ ಜಾರಿಯಿಂದ ಪಶ್ಚಿಮಘಟ್ಟದ ನಾಗರಿಕರ ಬದುಕು ಬೀದಿಗೆ ಬರಲಿದೆ ಎಂಬ ವಿಚಾರವನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಸ್ತೂರಿರಂಗನ್ ವರದಿ ಅತ್ಯಂತ ಸೂಕ್ಷ್ಮ ವಿಚಾರ. ಈ ವರದಿ ಅನುಷ್ಠಾನಗೊಂಡರೆ ಪಶ್ಚಿಮ ಘಟ್ಟದ ಬಹುತೇಕರ ಬದುಕು ಬೀದಿಗೆ ಬರಲಿದೆ. ನಮ್ಮ ಸರಕಾರ ಇದ್ದಾಗಲೂ ವರದಿ ಜಾರಿಗೆ ಒತ್ತಡ ಬಂದಿತ್ತು. ಆದರೆ ಕೆಲ ಲೋಪಗಳ ಆಧಾರದಲ್ಲಿ ನಾವು ಅದಕ್ಕೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ರಾಜ್ಯ ತನ್ನ ನಿಲುವನ್ನು ಕೇಂದ್ರಕ್ಕೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಗಾಡ್ಗೀಳ್ ವರದಿಯ ಲೋಪ ಸರಿದೂಗಿಸಲು ಕಸ್ತೂರಿರಂಗನ್ ವರದಿ ಮೊರೆ ಹೋಗಲಾಯ್ತು. ಇದು ಪಶ್ಚಿಮ ಘಟ್ಟದ ಜನರನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ. ವರದಿಯ ಎಕೋ ಸೆನ್ಸಿಟಿವ್ ಏರಿಯಾಗಳನ್ನು ಗುರುತಿಸಿರುವ ಬಗ್ಗೆ ಅಪಸ್ವರಗಳಿದೆ. ಅವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲಾಗಿದೆ ಎಂಬ ಆರೋಪವಿದೆ ಎಂದಿದ್ದಾರೆ.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಶ್ಚಿಮ ಘಟ್ಟಗಳ ರಕ್ಷಣೆ ಅತ್ಯಗತ್ಯ. ಆದರೂ ಕಾಡೊಳಗೆ ಬದುಕು ಕಟ್ಟಿಕೊಂಡವರ ಹಿತಕಾಯುವುದು ಅಷ್ಟೇ ಮುಖ್ಯ. ಕೃಷಿ ಭೂಮಿಯನ್ನು ಕೂಡ ಎಕೋ ಸೆನ್ಸಿಟಿವ್ ಏರಿಯಾ ಎಂದು ಗುರುತಿಸಿರುವುದು ಈ ವರದಿಯ ಅತಿದೊಡ್ಡ ಲೋಪ. ಮೊದಲು ಈ ವರದಿಯ ಅವೈಜ್ಞಾನಿಕ ಸಮೀಕ್ಷೆಯ ಗೊಂದಲ ಪರಿಹಾರವಾಗಬೇಕಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News