ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

Update: 2020-10-09 13:28 GMT

ಬೆಂಗಳೂರು, ಅ.9: ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.41.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆಯಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಕೆಲ ವಿದ್ಯಾರ್ಥಿಗಳಿಗೆ ಕೊರೋನ ನಡುವೆ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೂರಕ ಪರೀಕ್ಷೆಯಲ್ಲಿ 2,12,678 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 87,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸೆಪ್ಟೆಂಬರ್ 7 ರಿಂದ 19ರವರೆಗೆ ಒಟ್ಟು 305 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಮೌಲ್ಯಮಾಪನವು 11 ಶಿಬಿರದಲ್ಲಿ 3,162 ಮೌಲ್ಯಮಾಪಕರಿಂದ ಬೆಂಗಳೂರಿನಲ್ಲಿ ನಡೆಸಲಾಗಿತ್ತು.

ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದು, ಶೇ.45 ರಷ್ಟು ಫಲಿತಾಂಶ ಗಳಿಸಿದ್ದಾರೆ. ಬಾಲಕರಲ್ಲಿ ಶೇ. 38.30ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದಂತೆ ಗ್ರಾಮಾಂತರ ಪ್ರದೇಶದ ಶೇ.45.78 ರಷ್ಟು ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ ಶೇ.39.95 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಕಲಾ ವಿಭಾಗದಲ್ಲಿ 90,637 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 40,911 ವಿದ್ಯಾರ್ಥಿಗಳು ಉತ್ತೀರ್ಣ(ಶೇ.45.14)ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 74,477 ವಿದ್ಯಾರ್ಥಿಗಳು ಹಾಜರಾಗಿದ್ದು 29,062 ವಿದ್ಯಾರ್ಥಿಗಳು ಉತ್ತೀರ್ಣ(ಶೇ.39.02)ರಾಗಿದ್ದಾರೆ. ಹಾಗೂ ವಿಜ್ಞಾನ ವಿಭಾಗದಲ್ಲಿ 47,564 ವಿದ್ಯಾರ್ಥಿಗಳು ಹಾಜರಾಗಿದ್ದು 17,811 ವಿದ್ಯಾರ್ಥಿಗಳು ಉತ್ತೀರ್ಣ(ಶೇ.37.45)ರಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ 1,20,262 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 54,613 ವಿದ್ಯಾರ್ಥಿಗಳು ಉತ್ತೀರ್ಣ(ಶೇ.45.41)ರಾಗಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ 92,416 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 33,171 ವಿದ್ಯಾರ್ಥಿಗಳು ಉತ್ತೀರ್ಣ (ಶೇ.35.89)ರಾಗಿದ್ದಾರೆ.

ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗಾಗಿ ಅಕ್ಟೋಬರ್ 10ರಿಂದ 16ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ರೂ.530 ಹಾಗೂ ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ನಿಗದಿ ಮಾಡಲಾಗಿದೆ. ಅಂಕಗಳ ಮರುಎಣಿಕೆಗೆ ಶುಲ್ಕ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News