ವಿದ್ಯಾಗಮ ಯೋಜನೆ ಕೊರೋನ ಸೋಂಕು ಹರಡಲು ದಾರಿ: ಪ್ರಿಯಾಂಕ್ ಖರ್ಗೆ ಆರೋಪ

Update: 2020-10-09 16:37 GMT

ಬೆಂಗಳೂರು, ಅ.9: ವಿದ್ಯಾಗಮ ಯೋಜನೆಯೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅದರಿಂದ ಸೋಂಕು ಹೆಚ್ಚಳಕ್ಕೆ ಅವಕಾಶ ಆಗುವುದು ಬಿಟ್ಟರೆ ಏನು ಆಗಿಲ್ಲ. ಸರಕಾರ ತಮ್ಮ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಶಾಲೆಗಳ ಆರಂಭದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಚಿಕ್ಕಮಕ್ಕಳು ಸುರಕ್ಷಿತ ಅಂತರ ಹೇಗೆ ಕಾಯ್ದುಕೊಳ್ತಾರೆ? ಏಳರ ನಂತರ ಮಕ್ಕಳಿಗೆ ಶಿಕ್ಷಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಆಟ ಆಡುವ ವೇಳೆ ಹೇಗೆ ಅಂತರ ಕಾಪಾಡೋದು? ಸ್ಯಾನಿಟೈಸರ್ ಸರಿಯಾಗಿ ಬಳಕೆ ಹೇಗೆ ಮಾಡೋಕೆ ಸಾಧ್ಯ? ಮಕ್ಕಳಿಗೆ ಮಾಸ್ಕ್ ಹಾಕಿಕೊಂಡಿರೋಕೆ ಸಾಧ್ಯವೇ? ಇವೆಲ್ಲವನ್ನೂ ಸರಕಾರ ಗಮನಿಸಬೇಕು ಎಂದು ಹೇಳಿದರು.

ಕೊರೋನ ಸೋಂಕು ರಾಜ್ಯದಲ್ಲಿ ಹೆಚ್ಚಾಗ್ತಿದೆ. ತಿಂಗಳಿಗೊಮ್ಮೆ ಶಾಲೆ ಪ್ರಾರಂಭಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳುತ್ತಲೇ ಇದಾರೆ. ಆದರೆ, ಶಾಲೆ ಪ್ರಾರಂಭದ ಬಗ್ಗೆ ತಜ್ಞರ ಅಭಿಪ್ರಾಯ ಪಡೆದಿದ್ದಾರಾ? ವೈರಲಾಜಿಸ್ಟ್, ವೈದ್ಯರು, ತಜ್ಞರ ಸಲಹೆ ಪಡೆದಿಲ್ಲ. ಮಕ್ಕಳು, ಪೋಷಕರ ಅಭಿಪ್ರಾಯವನ್ನೂ ಪಡೆದಿಲ್ಲ. ಮಕ್ಕಳ ಬಗ್ಗೆ ವೈಜ್ಞಾನಿಕ ಚಿಂತನೆ ಮಾಡಿಲ್ಲ. ಖಾಸಗಿ ಶಾಲೆ ಶುಲ್ಕ ಬಗ್ಗೆ ಮಾತ್ರ ಅವರು ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ಸಚಿವರಿಗೆ ಸರಕಾರಿ ಶಾಲೆಗಳ ಮಕ್ಕಳ ಕುರಿತು ಕಾಳಜಿಯಿಲ್ಲ. ಆನ್‍ಲೈನ್ ಶಿಕ್ಷಣ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಗ್ರಾಮೀಣ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಹೇಗೆ ಸಾಧ್ಯ. ಶಿಕ್ಷಕರಿಗೆ ಕಳೆದ ಏಳೆಂಟು ತಿಂಗಳಿಂದ ಶಿಕ್ಷೆ ನೀಡುತ್ತಿದ್ದಾರೆ. ವಿದ್ಯಾಗಮ ಶಿಕ್ಷಣವೂ ಸೋಂಕಿಗೆ ದಾರಿ ಮಾಡಿಕೊಡುತ್ತಿದೆ. ಸರಿಯಾದ ಶಿಕ್ಷಣವೇ ಅಲ್ಲಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News