ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಬೆತ್ತಲೆ ಮಾಡಲಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

Update: 2020-10-09 15:55 GMT

ಮಂಡ್ಯ, ಅ.9: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಬೆತ್ತಲೆ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ನಾಳೆ(ಅ.10) ಬೆಳಗ್ಗೆ 11 ಗಂಟೆಗೆ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ರೈತರ ಸಮಾವೇಶದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ ಹೋರಾಡಿದ ಕಾಂಗ್ರೆಸ್ ಬಿಜೆಪಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎರಡು ಕೋಟಿ ರೂ. ಕೋವಿಡ್ ಭ್ರಷ್ಟಾಚಾರ, ಸಿಎಂ ಪುತ್ರ ವಿಜಯೇಂದ್ರ ಲಂಚ ಪ್ರಕರಣ ಬಗ್ಗೆ ಧನಿ ಎತ್ತಿದ ಕಾರಣಕ್ಕೆ, ಉಪಚುನಾವಣೆಯಲ್ಲಿ ಜನರನ್ನು ದಿಕ್ಕು ತಪ್ಪಿಸಲು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ಪ್ರಶ್ನಿಸಿದವರ ವಿರುದ್ಧ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನದ ಹಕ್ಕನ್ನು ಉಲ್ಲಂಘಿಸಲಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ ಎಂದು ಸಲೀಂ ತಿಳಿಸಿದರು.

ಬಿಜೆಪಿ ಸರಕಾರದ ರೈತ, ಜನವಿರೋಧಿ ನೀತಿಗಳ  ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಜ್ಯದ ರೈತ ಸಂಘಟನೆಗಳ ಮುಖಂಡರುಗಳು, ವಿವಿಧ ರೈತಪರ ಹೋರಾಟಗಾರರು, ಕೃಷಿ ತಜ್ಞರು, ಪ್ರಗತಿಪರ ರೈತರು ಹಾಗೂ ಚಿಂತಕರು ಸೇರಿದಂತೆ ರೈತ ಸಮ್ಮೇಳನವನ್ನು ಪಕ್ಷಾತೀತವಾಗಿ ನಾಳೆ ಮಂಡ್ಯದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಝಮೀರ್ ಅಹ್ಮದ್, ಮಾಜಿ ಶಾಸಕ ಎಚ್. ಬಿ.ರಾಮು, ಗಣಿಗ ರವಿಕುಮಾರ್, ಸಿ.ಡಿ.ಗಂಗಾಧರ್, ಅಂಜನಾ, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News