'ಕಬ್ಬಿನ ಬಾಕಿ ಕೊಡಿ, ಇಲ್ಲವೇ ನನ್ನನ್ನು ಸಮಾಧಿ ಮಾಡಿ'

Update: 2020-10-09 16:06 GMT

ಬೆಳಗಾವಿ, ಅ. 9: ತಾನು ಬೆಳೆದ‌ ಕಬ್ಬನ್ನು ಕಾರ್ಖಾನೆಗೆ ಕಳಿಸಿದ‌ರೂ ಬಿಲ್ ಸಿಗದ ಹಿನ್ನೆಲೆಯಲ್ಲಿ ರೈತನೋರ್ವ ತನ್ನ ಸಮಾಧಿ ತಾನೆ ತೋಡಿಕೊಂಡು ಅದರಲ್ಲಿ ಕುಳಿತು 'ನನ್ನನ್ನು ಸಮಾಧಿ ಮಾಡಿ, ಇಲ್ಲವೇ ಕಬ್ಬಿನ ಬಾಕಿ ಕೊಡಿಸಿ' ಎಂದು ಆಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇಂಥ ಮನಕುಲುಕುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಎಂ. ಕೆ. ಹುಬ್ಬಳ್ಳಿಯ ಸಕ್ಕರೆ ಕಾರ್ಖಾನೆಯೊಂದು ಕಬ್ಬಿನ ಬಾಕಿ ಬಿಲ್ ನೀಡದ ಹಿನ್ನೆಲೆಯಲ್ಲಿ ರೈತ ಶಿವಾನಂದ ಗೋಹಾರ್ ತನ್ನ ಸಮಾಧಿಯನ್ನು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ರೈತ ಶಿವಾನಂದ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬು ಹಾಕಿದ್ದಾನೆ ಎಂದು ಹೇಳಲಾಗಿದ್ದು, ಇವರಿಗೆ ಕಾರ್ಖಾನೆಯಿಂದ ಬರಬೇಕಾಗಿದ್ದ 85 ಸಾವಿರ ರೂ. ಹಣ ಸಿಗದೆ ಇರುವುದರಿಂದ ತೊಂದರೆಗೆ ಒಳಗಾಗಿದ್ದು, ವಿನೂತನ ಪ್ರತಿಭಟನೆ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

''ಸಕ್ಕರೆ ಕಾರ್ಖಾನೆಗೆ ಹಲವು ಬಾರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಬರಬೇಕಾದ ಬಾಕಿ ಮೊತ್ತ ಬಂದಿಲ್ಲ. ಈಗಾಗಲೇ ಕೋವಿಡ್ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿ ಇದ್ದೇವೆ. ನನಗೆ ಬಂದಿರುವ ಪರಿಸ್ಥಿತಿ ಯಾರಿಗೂ ಬರಬಾರದು'' ಎಂದು ಅವರು ಕಣ್ಣೀರಿಟ್ಟಿದ್ದಾರೆ. ಸಕ್ಕರೆ ಕಾರ್ಖಾನೆಗಳು ಕಬ್ಬಿಲ್ ಬಿಲ್ ನೀಡದಿರುವುದರಿಂದ ಆತ್ಮಹತ್ಯೆ ಮಾಡಿ ಕೊಳ್ಳುವುದೊಂದೇ ದಾರಿ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯ ಈ ಸಕ್ಕರೆ ಕಾರ್ಖಾನೆ ಎಂ.ಕೆ. ಹುಬ್ಬಳ್ಳಿಯ ಅನೇಕ ರೈತರ ಮೂರು ವರ್ಷದ ಕಬ್ಬಿನ ಬಾಕಿ ಬಿಲ್ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಇದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ಕಣ್ಣೀರು ಹಾಕಿದ್ದಾರೆ. ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ರೈತರ ಕಬ್ಬಿನ ಬಾಕಿ ಕೊಡಿಸಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News