×
Ad

5 ಕಿ.ಮೀ ದೂರದ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಹೊರಟ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ

Update: 2020-10-09 22:28 IST

ಹನೂರು, ಅ.9: ಹೆರಿಗೆಗಾಗಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ದಾರಿ ಮಧ್ಯೆಯೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಆಣೆಹೊಲ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಅಣೆಹೊಲ ಗ್ರಾಮದ ವೀರಣ್ಣ ಪತ್ನಿ ಕಮಲ (22) ತುಂಬು ಗರ್ಭಿಣಿಯಾಗಿದ್ದರು. ಗುರುವಾರ ರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ ಮನೆಗೆ ಸರಿಯಾದ ರಸ್ತೆ ಇಲ್ಲದಿದ್ದದರಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ನಡೆದುಕೊಂಡೇ ಬರಲು ಮನೆಯಿಂದ ಇಬ್ಬರೂ ಹೊರಟಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಯಿಂದ 250 ಮೀಟರ್‌ ದೂರ ಬಂದಾಗ ಹೆರಿಗೆ ನೋವು ತೀವ್ರಗೊಂಡು ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ವಾಹನ ಕರೆತರಲು ವೀರಣ್ಣ ಗ್ರಾಮದತ್ತ ತೆರಳಿದಾಗ ಕಗ್ಗತ್ತಲಲ್ಲಿ, ಕಾಡು ಪ್ರಾಣಿಗಳ ಭಯದ ನಡುವೆ ಮಗುವಿನೊಂದಿಗೆ ತಾಯಿ ಕಾಲ ದೂಡಿದ್ದಾರೆ. ಬಳಿಕ ಪತಿ ವೀರಣ್ಣ ನೆರೆ ಹೊರೆಯವರೊಂದಿಗೆ ಸರಕು ಸಾಗಣೆ ವಾಹನವನ್ನು ಕರೆತಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ನೀಡಿದ ಡಾ.ಮುಕುಂದ ಅವರು 'ಮಗು 3 ಕೆ.ಜಿ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿರುವುದಾಗಿ' ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News