ರೈತ ವಿರೋಧಿ ಕಾಯ್ದೆ ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಹೋರಾಟ ನಿಲ್ಲದು: ಎನ್.ಚಲುವರಾಯಸ್ವಾಮಿ
ಮಂಡ್ಯ, ಅ.9: ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ನಿಲ್ಲದು. ಸಮಸ್ಯೆ ಪರಿಹಾರವಾಗುವವರೆಗೂ ನಿರಂತರ ಹೋರಾಟ ನಡೆಯುತ್ತದೆ. ಕಾನೂನು ಸಮರಕ್ಕೂ ಪಕ್ಷ ಸಿದ್ದವಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶನಿವಾರ(ಅ.10) ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ರೈತರ ಸಮಾವೇಶದ ಸಿದ್ದತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪಕ್ಷ ಸಂಘಟನೆ ಸಮಾವೇಶ ಅಲ್ಲ. ರೈತರ, ಜನಸಾಮಾನ್ಯರ ಸಮಸ್ಯೆ ಬಗ್ಗೆ ಹೋರಾಟ ಮಾಡುವುದು ವಿಪಕ್ಷದ ಜವಾಬ್ದಾರಿ ಎಂದು ಸಮಾವೇಶ ಆಯೋಜನೆಯನ್ನು ಸಮರ್ಥಿಸಿಕೊಂಡರು.
ರೈತರ ಸಮಸ್ಯೆಯನ್ನು ಕುರಿತು ಸಮಾವೇಶ ಮಾಡಲು ಎಐಸಿಸಿ ತೀರ್ಮಾನಿಸಿದ್ದು, ಕೆಪಿಸಿಸಿ ಮಂಡ್ಯ ಜಿಲ್ಲೆಗೆ ಅವಕಾಶ ಕಲ್ಪಿಸಿದೆ. ಪಕ್ಷಾತೀತವಾಗಿ ನಡೆಯುತ್ತಿದೆ. ರೈತ ನಾಯಕರು, ರೈತರಿಗೆ ಸಂಬಂಧಿಸಿದ ಅನೇಕ ಸಂಘಟನೆಗಳ ಮುಖಂಡರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಇದು ಸಾರ್ವಜನಿಕ ಸಮಾವೇಶವಲ್ಲ, ರೈತರ ಸಮಾವೇಶ. ಹಾಗಾಗಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದೇವೆ. ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಸೂಚಿಸಿರುವ ಮಾರ್ಗಸೂಚಿಯನ್ವಯವೇ ಸಮಾವೇಶ ನಡೆಯಲಿದೆ. ಚರ್ಚೆಯಲ್ಲಿ ಭಾಗವಹಿಸುವವರು ಮಾತ್ರ ಭವನದೊಳಗೆ ಇರುತ್ತಾರೆ. ಕಾರ್ಯಕರ್ತರು ಹೊರಗಡೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸರಕಾರದ ಕೆಲವು ತೀರ್ಮಾನಗಳ ವಿರುದ್ಧ ವಿಪಕ್ಷಗಳು ಮತ್ತು ಜನರ ಪ್ರತಿರೋಧ ಉಂಟಾದಾಗ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದನ್ನು ಈ ಹಿಂದಿನ ಸರಕಾರಗಳಲ್ಲಿ ಗಮನಿಸಿದ್ದೇವೆ. ಆದರೆ, ಈಗಿನ ಬಿಜೆಪಿ ಸರಕಾರ ಯಾವುದಕ್ಕೂ ಬೆಲೆ ಕೊಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನವರ ಬೀದಿ ನಾಕಟವೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಜವಾಬ್ದಾರಿಯುತ ಕೇಂದ್ರ ಸಚಿವರು ಈ ರೀತಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಒಂದೇ ಅಲ್ಲ, ಇಡೀ ರೈತರು ಇದರ ವಿರುದ್ಧ ಬೀದಿಗಿಳಿದಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ ಎಂದು ತಿರುಗೇಟು ನೀಡಿದರು.
ಟಿವಿ ಚಾನಲ್‍ಗಳ ವಿರುದ್ಧ ವಾಗ್ದಾಳಿ
ಬಿಜೆಪಿಯವರೇ ಗುತ್ತಿಗೆ ಪಡೆದಿರುವ ರೀತಿಯಲ್ಲಿ ಎರಡು ಮೂರು ಟಿವಿ ಚಾನಲ್‍ಗಳು ನಡೆದುಕೊಳ್ಳುತ್ತಿವೆ. ಗಂಟೆಗಟ್ಟಲೇ ಅವರದೇ ಸುದ್ದಿ ಪುನರಾವರ್ತನೆ ಆಗುತ್ತಿರುತ್ತದೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಲಿದ್ದಾರೆ. ಅಲ್ಲಿವರೆಗೆ ಅವರ ಆಟ ನಡೆಯಲಿ ಬಿಡಿ ಎಂದು ಅವರು ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಮಾಚಲಪ್ರದೇಶದ ಸುರಂಗ ಮಾರ್ಗ ಕಾಮಗಾರಿ ಆರಂಭವಾದುದು ಡಾ.ಮನಮೋಹನ್ ಸಿಂಗ್ ಕಾಲದಲ್ಲಿ. ಅದಕ್ಕೆ ಸುಮಾರು 20 ಸಾವಿರ ಕೋಟಿ ರೂ.ಗಳನ್ನು ಸಿಂಗ್ ಸರಕಾರ ಕೊಟ್ಟಿತ್ತು. ಈಗ ಅದರ ಉದ್ಘಾಟನೆ ಆಗಿದೆ ಸರಿ. ಆದರೆ, ಉದ್ಘಾಟನಾ ಸಮಾರಂಭಕ್ಕೆ ಮನಮೋಹನ್ ಸಿಂಗ್ ಅವರನ್ನು ಸೌಜನ್ಯಾಕ್ಕಾದರೂ ಕರೆಯಬೇಕಿತ್ತು ಎಂದು ಅವರು ಪ್ರತಿಕ್ರಿಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ. ವಿಪಕ್ಷ ನಾಯಕರ ವಿರುದ್ಧ ರಾಷ್ಟ್ರದೆಲ್ಲೆಡೆ ಇಡಿ, ಐಟಿ, ಸಿಬಿಐ ದಾಳಿ ನಡೆಯುತ್ತಲೇ ಇದೆ. ಡಿ.ಕೆ.ಶಿವಕುಮಾರ್ ಇದರಲ್ಲಿ ಗೆದ್ದು ಬರಲಿದ್ದಾರೆ. ಅವರು ಅಪರಾದಿಯಲ್ಲ, ಆರೋಪಿಯಷ್ಟೇ. ಸಚಿವ ಕೆ.ಎಸ್.ಈಶ್ವರಪ್ಪ ಅವರು ಯೋಚನೆ ಮಾಡಿ ಮಾತನಾಡಬೇಕು ಎಂದು ಅವರು ಕಿಡಿಕಾರಿದರು.
ಮೈಸೂರಿನ ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ಗಣಿಗ ರವಿಕುಮಾರ್, ಸಿ.ಎಂ.ದ್ಯಾವಪ್ಪ, ಇತರ ಮುಖಂಡರು ಉಪಸ್ಥಿತರಿದ್ದರು.