ದೋಷಾರೋಪ ಪಟ್ಟಿ ಸಲ್ಲಿಸಲು ವಿಳಂಬ: ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು
Update: 2020-10-11 18:34 IST
ಬೆಂಗಳೂರು, ಅ.11: ದೋಷಾರೋಪ ಪಟ್ಟಿ ಸಲ್ಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಾದಕ ವಸ್ತು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಆರ್.ಟಿ.ನಗರದ ಸೈಯದ್ ಮಜೀದ್ ಹಾಗೂ ದೇವರಚಿಕ್ಕನಹಳ್ಳಿಯ ರಮೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಹೆಚ್ಚುವರಿ ಆಗಿ ನೀಡಿರುವ 90 ದಿನಗಳ ನಂತರವೂ ಪೊಲೀಸರು ಚಾರ್ಜ್‍ಶೀಟ್ ಸಿಲ್ಲಿಸಿಲ್ಲ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದು ನ್ಯಾಯಸಮ್ಮತವಲ್ಲ. ತನಿಖೆ ಪೂರ್ಣಗೊಂಡಿಲ್ಲ ಮತ್ತು ನಿಗದಿತ ಅವಧಿಯಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ ಆರೋಪಿಗಳ ಜಾಮೀನು ಪಡೆದುಕೊಳ್ಳುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.