×
Ad

4ನೇ ತರಗತಿವರೆಗೆ ಓದಲೇ ಇಲ್ಲ, ಆದರೆ ನಾನೇನು ದಡ್ಡನಾ ?: ಸಿದ್ದರಾಮಯ್ಯ

Update: 2020-10-11 20:21 IST

ಬೆಂಗಳೂರು, ಅ. 11: `ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮುಖಂಡರೇ ಬಿಜೆಪಿ ಅಭ್ಯರ್ಥಿಗಳನ್ನು ಒಪ್ಪದ ಹಿನ್ನಲೆಯಲ್ಲಿ ಆ ಪಕ್ಷದಲ್ಲಿ ಸಂಘರ್ಷ ಏರ್ಪಟ್ಟಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಆರ್‍ಆರ್ ನಗರ ಮತ್ತು ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಶಾಸಕರು, ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿ ಮೂಲ-ವಲಸಿಗರ ಮಧ್ಯೆ ಭಿನ್ನಮತ ನಡೆಯುತ್ತಿದೆ. ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳೇ ಇಲ್ಲ ಎಂದು ಟೀಕಿಸಿದರು.

ಅ.14ರಂದು ಆರ್.ಆರ್ ನಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸಲಿದ್ದಾರೆ. ಅ.15ಕ್ಕೆ ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಲಿದ್ದು, ಎರಡು ಕಡೆಗಳಲ್ಲಿ ಖುದ್ದು ನಾನೇ ಭಾಗವಹಿಸಲಿದ್ದೇನೆ ಎಂದ ಅವರು, ಅಭ್ಯರ್ಥಿಗಳ ಗೆಲುವಿಗೆ ಪ್ರತಿ ವಾರ್ಡ್ ಗೆ ಒಂದೊಂದು ತಂಡ ರಚನೆ ಮಾಡಲಾಗಿದೆ, ಪ್ರತಿಬೂತ್ ಗೂ ಶಾಸಕರು ಮತ್ತು ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಶಾಲೆ ಆರಂಭ ಸದ್ಯಕ್ಕೆ ಬೇಡ. ವಿದ್ಯೆ ಯಾವಾಗ ಬೇಕಾದರೂ ಕಲಿಸಬಹುದು. ಆದರೆ, ಮಕ್ಕಳು ಮತ್ತು ಶಿಕ್ಷಕರ ಜೀವ ಮುಖ್ಯ. ನಾನು 4ನೆ ತರಗತಿಯವರೆಗೆ ಓದಲೇ ಇಲ್ಲ. ಆದರೆ, ನಾನೇನು ದಡ್ಡನಾ? ಹದಿಮೂರು ಬಜೆಟ್ ಮಂಡಿಸಿದ್ದೇನೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತಾರೆ. ಅದು ಅವರಿಗೆ ಫಲ ನೀಡುವುದಿಲ್ಲ. ಯಾವ ಸಮುದಾಯವೂ ಒಬ್ಬರು ಹಿಂದೆ ಹೋಗುವುದಿಲ್ಲ. ಒಕ್ಕಲಿಗ ಸಮುದಾಯ ಕುಮಾರಸ್ವಾಮಿ ಅಥವಾ ಮತ್ತೊಬ್ಬರ ಹಿಂದೆ ಹೋಗುವುದಿಲ್ಲ ಎಂದ ಸಿದ್ದರಾಮಯ್ಯ, ಮಂಡ್ಯದಲ್ಲಿ ಎಚ್‍ಡಿಕೆ ಪುತ್ರನನ್ನು ಏಕೆ ಸೋಲಿಸಿದರು. ತುಮಕೂರಿನಲ್ಲಿ ದೇವೇಗೌಡರನ್ನು ಏಕೆ ಸೋಲಿಸಿದ್ದು, ಜಾತಿ ವಿಚಾರ ಪ್ರಸ್ತಾಪಿಸುವುದರಿಂದ ಲಾಭ ಆಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News