ಕಸಾಪ ಅಧ್ಯಕ್ಷರ ಹುದ್ದೆಗೆ ನಿವೃತ್ತ ಅಧಿಕಾರಿಗಳ ಪೈಪೋಟಿ

Update: 2020-10-11 17:53 GMT

ಬೆಂಗಳೂರು, ಅ. 11: ನಾಡಿನ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಅಧ್ಯಕ್ಷರ ಅಧಿಕಾರ ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಆ ಹುದ್ದೆಯ ಮೇಲೆ ನಿವೃತ್ತ ಅಧಿಕಾರಿಗಳ ಕಣ್ಣು ಬಿದ್ದಿದೆ. ಮುಂದಿನ ಮಾರ್ಚ್ ನಲ್ಲಿ ನಡೆಯಲಿರುವ ಚುನಾವಣೆಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಈಗಾಗಲೇ ಪ್ರಚಾರವೂ ಆರಂಭಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಕಾರ್ಯಕಾರಿಣಿ ಸಮಿತಿಯ ಆಡಳಿತ ಅವಧಿ ಮುಂದಿನ ವರ್ಷದ ಮಾರ್ಚ್ ಗೆ ಮುಕ್ತಾಯವಾಗಲಿದೆ. ಅನಂತರ ಚುನಾವಣೆ ನಡೆಯಲಿದ್ದು, ಸಾಹಿತ್ಯ ವಲಯದಿಂದ ದೂರ ಇದ್ದ ಅಧಿಕಾರಿಗಳು ಹಾಗೂ ಸಾಹಿತ್ಯ ವಲಯದೊಂದಿಗೆ ಸಂಪರ್ಕ ಹೊಂದಿದ್ದವರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಮತ್ತು ತುಮಕೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಈಗಾಗಲೇ ನಿವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಶಿ ಹಾಗೂ ಆಹಾರ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕುಷ್ಟಗಿ ಮೂಲದ ಸಂಗಮೇಶ್ ಬಾದವಾಡಿಗಿ ಅವರು ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.

ನಿವೃತ್ತ ಅಧಿಕಾರಿಗಳಲ್ಲಿ ಸಂಗಮೇಶ್ ಬಾದವಾಡಗಿ ಅವರು ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಸಾಪದ ಮಾಜಿ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಮತ್ತು ಪುಂಡಲೀಕ ಹಾಲಂಬಿ ಅವರುಗಳ ಆಡಳಿತ ಅವಧಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅಲ್ಲದೆ, ಪ್ರಸ್ತುತ ಹಾಲಿ ಕಸಾಪ ಗೌರವ ಕಾರ್ಯದರ್ಶಿಯಾಗಿರುವ ವ.ಚ.ಚನ್ನೇಗೌಡರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಅಧ್ಯಕ್ಷ ಶೇಖರ ಗೌಡ ಮಾಲಿಪಾಟೀಲ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿ.ಕೆ.ರಾಮೇಗೌಡ ಸಹ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ.

ಕಸಾಪ ನಾಡಿನ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಇದನ್ನು ಕಟ್ಟಿ ಬೆಳೆಸುವಲ್ಲಿ ಅನೇಕ ಸಾಹಿತಿಗಳು ಸಾಕಷ್ಟು ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ, ಶ್ರಮವಹಿಸಿದವರು ಸಾಹಿತ್ಯ ಪರಿಷತ್ತಿಗೆ ಚುನಾಯಿತರಾಗಬೇಕು ಹೊರತು ಸರಕಾರಿ ಅಧಿಕಾರಿಗಳಾಗಿದ್ದವರಲ್ಲ'

- ಕೋ.ವೆಂ.ರಾಮಕೃಷ್ಣೇಗೌಡ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News