ಚಿತ್ರನಟಿ ಖುಷ್ಬೂ ಇಂದು ಬಿಜೆಪಿಗೆ ಸೇರ್ಪಡೆ ?

Update: 2020-10-12 05:44 GMT

ಚೆನ್ನೈ: ಚಿತ್ರರಂಗದಿಂದ ರಾಜಕೀಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಇಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಖುಷ್ಬೂ ಲಭ್ಯರಿರಲಿಲ್ಲ. ಸಂಜೆ ವಿಮಾನ ನಿಲ್ದಾಣದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಲು ಖುಷ್ಬೂ ನಿರಾಕರಿಸಿದ್ದರು.

ಇವರ ಜತೆಗೆ ತಮಿಳುನಾಡಿನ ಐಆರ್‌ಎಸ್ ಅಧಿಕಾರಿಯೊಬ್ಬರು ಮತ್ತು ಯೂಟ್ಯೂಬರ್ ಒಬ್ಬರು ಕೂಡಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್.ಮುರುಗನ್ ಶನಿವಾರದಿಂದ ದೆಹಲಿಯಲ್ಲಿದ್ದಾರೆ.

ಕಳೆದ ಒಂದು ತಿಂಗಳಿಂದ ಖುಷ್ಬೂ ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಬಿಜೆಪಿ ಬಗೆಗಿನ ತಮ್ಮ ಮನೋಭಾವ ಬದಲಾಗಿದೆ ಎಂದು ಖುಷ್ಬೂ ಈ ಹಿಂದೆ ಟ್ವೀಟ್ ಮಾಡಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಜತೆಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಪಕ್ಷದ ಮುಖಂಡ ರಾಹುಲ್‌ಗಾಂಧಿ ಅವರ ಕ್ಷಮೆ ಯಾಚಿಸಿದ್ದರು.

ಅ. 6ರಂದು ನಡೆದ ಪಕ್ಷದ ಸಮಾರಂಭವೊಂದರಲ್ಲಿ ಈ ವದಂತಿಗಳನ್ನು ಖುಷ್ಬೂ ಬಲವಾಗಿ ತಳ್ಳಿಹಾಕಿದ್ದರು. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಲ ವಿಷಯಗಳಲ್ಲಿ ಕಟುವಾಗಿ ಟೀಕಿಸಿದ್ದರು.

ರವಿವಾರ ಸಂಜೆ ದೆಹಲಿಗೆ ವಿಮಾನದಲ್ಲಿ ತೆರಳುವ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು. ಬಿಜೆಪಿಗೆ ಯಾವಾಗ ಸೇರುತ್ತೀರಿ ಎಂದು ಪ್ರಶ್ನಿಸಿದಾಗ, "ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದ್ದರು. ಈಗಲೂ ಕಾಂಗ್ರೆಸ್ ಪಕ್ಷದ ಸದಸ್ಯರಾಗಿಯೇ ಮುಂದುವರಿದಿದ್ದೀರಾ ಎಂಬ ಪ್ರಶ್ನೆಗೂ ಉತ್ತರಿಸಲು ನಿರಾಕರಿಸಿದ್ದರು.

2010ರವರೆಗೆ ಡಿಎಂಕೆಯಲ್ಲಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಸೇರಿದ್ದರು. ಖುಷ್ಬೂ 1990ರ ದಶಕದಲ್ಲಿ ತಮಿಳುಚಿತ್ರರಂಗದ ಖ್ಯಾತ ತಾರೆಯಾಗಿ ಮಿಂಚಿದ್ದರು. ಅವರ ವೃತ್ತಿ ಉತ್ತುಂಗದ ಸ್ಥಿತಿಯಲ್ಲಿ ಅಭಿಮಾನಿಗಳು ಅವರಿಗಾಗಿ ದೇವಾಲಯವನ್ನೂ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News