ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ರಕ್ಷಣೆ
Update: 2020-10-12 17:19 IST
ವಿಜಯಪುರ, ಅ.12: ರವಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ತೊರವಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯನ್ನು ಸಕಾಲಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅಡವಿ ಸಂಗಾಪುರದ ನಿವಾಸಿ ಬಂದೇನವಾಜ್ ಮೊಕಾಶಿ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಆತ ಅಡವಿ ಸಂಗಾಪುರದಿಂದ ಅತಾಲಟ್ಟಿಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ತೊರವಿ ಹಳ್ಳದಲ್ಲಿ ಸಿಲುಕಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಹಳ್ಳದಲ್ಲಿನ ಮುಳ್ಳಿನ ಕಂಟಿಗೆ ಸಿಲುಕಿಕೊಂಡು ಬಳಿಕ ತನ್ನ ಮೊಬೈಲ್‍ನಿಂದ ಮನೆಯವರಿಗೆ ವಿಷಯ ಮುಟ್ಟಿಸಿದ್ದಾನೆ.
ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಹಗ್ಗದ ಸಹಾಯದಿಂದ ಬಂದೇನವಾಜ್‍ನನ್ನು ವಿಜಯಪುರ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸುಮಾರು 200 ಅಡಿಯಷ್ಟು ದೂರ ಹಳ್ಳದಲ್ಲಿ ಕೊಚ್ಚಿ ಹೋಗಿ ಸಿಲುಕಿದ್ದ ಬಂದೇನವಾಜ್‍ನನ್ನು ರಕ್ಷಿಸಲಾಗಿದೆ.