×
Ad

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ: ಕರಾವಳಿ ಜಿಲ್ಲೆಗಳಲ್ಲಿ 'ರೆಡ್‍ ಅಲರ್ಟ್'

Update: 2020-10-12 17:27 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.12: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಬಹುತೇಕ ಕಡೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಹೆಚ್ಚಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಅ. 12 ರಿಂದ 14ರವರೆಗೂ ಕರ್ನಾಟಕದ ಬಹುತೇಕ ಕಡೆ ಮಳೆಯ ಅಬ್ಬರ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅ.12ರಿಂದ ಮೂರು ದಿನ ಮಳೆ ಹೆಚ್ಚಾಗಲಿದೆ. ಈ ಮೂರು ಜಿಲ್ಲೆಗಳಲ್ಲಿ ರೆಡ್‍ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ಉತ್ತರ ಒಳನಾಡಿನಲ್ಲೂ ಅ.12 ರಿಂದ 14ರವರೆಗೂ ಮಳೆಯಾಗುವ ಸಂಭವವಿದೆ. ಬೀದರ್, ಕಲಬುರ್ಗಿ, ಬಾಗಲಕೋಟೆ, ಯಾದಗಿರಿ, ರಾಯಚೂರು, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಅ.12 ರಿಂದ 14ರವರಗೆ ಈ ಪ್ರದೇಶಗಳಿಗೆ ಆರೆಂಜ್‍ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆ ಸಂಭವವಿದೆ. ಕರ್ನಾಟಕ ಮಾತ್ರವಲ್ಲದೆ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮಾ, ಮಹಾರಾಷ್ಟ್ರದಲ್ಲಿಯೂ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ರವಿವಾರದಿಂದಲೇ ಮಳೆ ಅಬ್ಬರ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಲೆನಾಡು, ಕರಾವಳಿ, ತುಮಕೂರು, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News