×
Ad

ಪದವಿ ಪೂರ್ವ ಕಾಲೇಜುಗಳಿಗೆ ರಜೆ ವಿಸ್ತರಿಸುವಂತೆ ರಮೇಶ್ ಬಾಬು ಮನವಿ

Update: 2020-10-12 17:59 IST

ಬೆಂಗಳೂರು, ಅ.12: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಶಾಲೆಗಳಿಗೆ ರಜೆ ನೀಡುವುದರ ಜೊತೆಗೆ ಇದೇ ಇಲಾಖೆ ವ್ಯಾಪ್ತಿಗೆ ಬರುವ ಪದವಿ ಪೂರ್ವ ಕಾಲೇಜುಗಳಿಗೂ ಆರೋಗ್ಯದ ದೃಷ್ಟಿಯಿಂದ ಹಾಗೂ ಮುಂಜಾಗ್ರತ ಕ್ರಮವಾಗಿ ಇದೇ ತಿಂಗಳ 30ರವರೆಗೆ ರಜೆಯನ್ನು ನೀಡಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಆರೋಗ್ಯ ಸಂರಕ್ಷಣೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ರಾಜ್ಯದ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜುಗಳ ಉಪನ್ಯಾಸಕರು ಜೀವದ ಹಂಗು ತೊರೆದು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲ ಮುಂಜಾಗ್ರತ ಕ್ರಮಗಳ ಮಧ್ಯೆಯೂ ಕೆಲವು ಉಪನ್ಯಾಸಕರು ಕೋವಿಡ್‍ಗೆ ಬಲಿಯಾಗಿರುವುದು ವಿಷಾದಕರ ಸಂಗತಿಯಾಗಿದೆ. ಕೋವಿಡ್ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ 30ರ ವರೆಗೆ ಪಿಯು ಕಾಲೇಜುಗಳಿಗೆ ರಜೆ ನೀಡುವುದರ ಮೂಲಕ ಶಾಲೆಗಳಿಗೆ ನೀಡಿರುವ ವಿನಾಯಿತಿಯನ್ನು ಪಿಯು ಕಾಲೇಜುಗಳಿಗೂ ವಿಸ್ತರಿಸಬೇಕಿದೆ. ಈ ವಿಚಾರದಲ್ಲಿ ಸರಕಾರದ ಯಾವುದೆ ನಿಧಾನಗತಿಯ ತೀರ್ಮಾನ ಮಕ್ಕಳ ಮತ್ತು ಉಪನ್ಯಾಸಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆಯ ಕಾರಣಕ್ಕಾಗಿ ಶೀತದ ವಾತಾವರಣ ಇದೆ. ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಗೆ ಬರುವುದರಿಂದ ಸಾಮಾನ್ಯವಾಗಿ ರೋಗ ಹರಡುವ ಸಾಧ್ಯತೆಗಳು ಹೆಚ್ಚು. ಉಪನ್ಯಾಸಕರು ಪಾಠ ಪ್ರವಚನಗಳಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಾಣಭಯದಲ್ಲಿ ಉಪನ್ಯಾಸಕರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಪಿಯು ಕಾಲೇಜಿನ ಉಪನ್ಯಾಸಕರು ಕೋವಿಡ್ ಮಧ್ಯೆಯೂ ಪರೀಕ್ಷಾ ಕಾರ್ಯ, ಮೌಲ್ಯಮಾಪನ ಕಾರ್ಯ, ದಾಖಲಾತಿ ಕಾರ್ಯ ಹಾಗೂ ಆನ್‍ಲೈನ್ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮಧ್ಯಂತರ ರಜೆಯನ್ನು ಪಿಯು ಉಪನ್ಯಾಸಕರಿಗೂ ನೀಡುವಂತೆ ಸಂಘದ ಪದಾಧಿಕಾರಿಗಳು ಪತ್ರದ ಮುಖಾಂತರ ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ಆದ ಕಾರಣ ರಾಜ್ಯ ಸರಕಾರ ಪಿಯು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಪಿಯು ಕಾಲೇಜುಗಳಿಗೆ ಈ ತಿಂಗಳ 30ರ ವರೆಗೆ ರಜೆ ನೀಡಬೇಕೆಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News