ಸಚಿವರ ಖಾತೆ ಬದಲಾವಣೆ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-10-12 12:47 GMT

ದಾವಣಗೆರೆ, ಅ.12: ಆಡಳಿತಾತ್ಮಕ ದೃಷ್ಠಿಯಿಂದ ಆರೋಗ್ಯ ಹಾಗೂ ವೈದ್ಯಕೀಯ ಖಾತೆ ಒಬ್ಬರೇ ಆಗಬೇಕು ಎನ್ನುವ ಉದ್ದೇಶ ಸಿಎಂ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸಂದರ್ಭದಲ್ಲಿ ಸರಿಯಾಗಿ ನಿಭಾಯಿಸುತ್ತಾರೆ ಅಂತ ಬದಲಾವಣೆ ಮಾಡಿರಬಹುದು.  ಸಾಮಾಜಿಕ ನ್ಯಾಯ ಕೊಡಬೇಕು ಎಂಬ ಉದ್ದೇಶದಿಂದ ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆ ಕೊಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಶ್ರೀರಾಮುಲುಗೆ ಸೂಕ್ತವಾಗಿದೆ ಎಂದರು.

ಬಿಜೆಪಿ ಗೆಲ್ಲುವ ಕುದುರೆ 
ಈ ಹಿಂದೆ ಬಿಜೆಪಿ ಟಿಕೆಟ್ ಕೊಡಲು ಹೋದರೂ ಅಭ್ಯರ್ಥಿಗಳು ಇರಲಿಲ್ಲ. ಈಗ ಕಾಲ ಬದಲಾಗಿದೆ. ಬಿಜೆಪಿ ಟಿಕೆಟ್ ಅಂದರೆ ಗೆಲ್ಲುವ ಪಕ್ಷವಾಗಿದೆ. ಆರ್ ಆರ್ ನಗರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ಕೊಡುವುದು ಸೂಕ್ತ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಿಜೆಪಿ ಸರ್ಕಾರ ಬಂದಿದೆ. ಮುನಿರತ್ನ ಅವರಿಗೆ ಅನ್ಯಾಯ ಆಗಬಾರದು ಎಂದರು. 

ಜಾತಿ ಬೆಳೆ ಬೆಳೆಯಲ್ಲ, ಎಲ್ಲಾ ನಾಟಕ  
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಬರೀ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಚುನಾವಣೆ ಬಂದಾಗ ಜಾತಿ ನೆನಪಾಗುತ್ತೆ ಎಂದು ಟೀಕಿಸಿದರು.    

1935 ರಿಂದ ಎಸ್ಟಿ ಪಟ್ಟಿಗೆ ಸೇರಿಸಲು ಬೆಂಗಳೂರಿನಿಂದ ದೆಹಲಿಗೆ ಓಡಾಡಿದ್ದೇನೆ. ಈ ಹಿನ್ನಲೆಯಲ್ಲಿ ಕಾಗಿನೆಲೆ ಶ್ರೀಗಳು ನನಗೆ ನೇತೃತ್ವ ವಹಿಸಲು ಹೇಳಿದ್ದರು. ಅದರಂತೆ ವಹಿಸಿದ್ದೇನೆ. ಸಮಾಜಗಳು ಸೌಲಭ್ಯ ಕೇಳುವುದು ತಪ್ಪಲ್ಲ. ಸರ್ಕಾರ ಹಾಗೂ ಕುರುಬ ಸಮಾಜದ ನಡುವೆ ಕೊಂಡಿಯಾಗಿ ನಾನು ಸೇವೆ ಮಾಡುತ್ತೇನೆ. ಕೊನೆಯಲ್ಲಿ ಕೇಂದ್ರ ಸರ್ಕಾರ ಎಸ್ಟಿ ಮೀಸಲಾತಿ ನೀಡುವುದರ ಬಗ್ಗೆ ತೀರ್ಮಾನಿಸುತ್ತೆ ಎಂದ ಅವರು, ಕುರುಬ ಸಮಾಜಕ್ಕೆ ಎಸ್ಟಿ ಬೇಡಿಕೆ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾದ ಬಗ್ಗೆ ಪ್ರಶ್ನೆಗೆ ಅವರನ್ನೇ ಕೇಳಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News