ಚಿಕ್ಕಮಗಳೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಎಸ್.ಸುರೇಶ್, ಉಪಾಧ್ಯಕ್ಷರಾಗಿ ರಮೇಶ್ ಅವಿರೋಧ ಆಯ್ಕೆ

Update: 2020-10-12 12:53 GMT

ಚಿಕ್ಕಮಗಳೂರು, ಅ.12: ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ತರೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಶಾಸಕ ಡಿ.ಎಸ್.ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ಎಲ್.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಗರದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಡಿ.ಎಸ್.ಸುರೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಎಲ್.ರಮೇಶ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಉಳಿದ ಯಾವುದೇ ನಿದೇರ್ಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಂದ ಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕ ಆಗಿ ಆಯ್ಕೆಯಾದ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್.ಸುರೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದರು.

ಇನ್ನು ಇತರ ಸಹಕಾರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿಜೆಪಿ ಪಕ್ಷದ ಮುಖಂಡ ಟಿ.ಎಲ್.ರಮೇಶ್ ಡಿಸಿಸಿ ಬ್ಯಾಂಕ್‍ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ ತರೀಕೆರೆ ಕಂದಾಯ ಉಪವಿಭಾದ ಅಧಿಕಾರಿ ರೇಣುಕಾಪ್ರಸಾದ್ ಘೋಷಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ರವಿವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಿ.ಎಸ್.ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ಎಲ್.ರಮೇಶ್ ಆಯ್ಕೆಯನ್ನು ಸಭೆಯಲ್ಲಿ ಸಿ.ಟಿ.ರವಿ ಅಂತಿಮಗೊಳಿಸಿದ್ದರೆಂದು ತಿಳಿದುಬಂದಿದ್ದು, ಅದರಂತೆ ಸೋಮವಾರ ಈ ವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News