ತನ್ನ ಬಳಿ ಇದ್ದ ಸಮಾಜ ಕಲ್ಯಾಣ ಖಾತೆ ಹಿಂಪಡೆದ ಬಗ್ಗೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ
ಬೆಂಗಳೂರು, ಅ. 12: ನನ್ನ ಬಳಿ ಇದ್ದ ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಖಾತೆಯನ್ನು ಹಿಂಪಡೆದು ನನ್ನ ಸಹೋದ್ಯೋಗಿಯಾಗಿರುವ ಬಿ.ಶ್ರೀರಾಮುಲು ಅವರಿಗೆ ನೀಡಿದ್ದಕ್ಕೆ ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾತೆ ಬದಲಾವಣೆ ಮಾಡುವ ಬಗ್ಗೆ ನನ್ನ ಬಳಿ ಈ ಹಿಂದೆಯೇ ಚರ್ಚೆ ಮಾಡಿದ್ದರು. ಇದಕ್ಕೆ ನಾನು ಒಪ್ಪಿಗೆಯನ್ನು ನೀಡಿದ್ದೆ. ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದರು.
ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲುಗೆ ನೀಡುವುದಾಗಿ ಮೊದಲೇ ನನಗೆ ಮಾಹಿತಿ ನೀಡಿದ್ದರು. ಇದರಿಂದ ನನಗೆ ಅಸಮಾಧಾನ ಉಂಟಾಗಿಲ್ಲ. ಇರುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದ ಅವರು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಒಬ್ಬರ ಬಳಿ ಇದ್ದರೆ, ಸಮಪರ್ಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ರಾಮುಲು ಅವರಿಗೆ ಹೆಚ್ಚುವರಿ ಖಾತೆಯನ್ನು ನೀಡಿರುವ ಸಾಧ್ಯತೆಗಳಿವೆ ಎಂದರು.
ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನೀಡಲಾಗಿದೆ. ರಾಮುಲು ಅವರು ತಮ್ಮಗೆ ನೀಡಿದ್ದ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ ಕಾರಣ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಂತಹ ಮಹತ್ವದ ಖಾತೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಕಾರಜೋಳ ವಿವರಣೆ ನೀಡಿದರು.
ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಇಲಾಖೆಯ ವಸತಿ ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠ, ಪ್ರವಚನಗಳು ನಿಂತು ಹೋಗಿವೆ. ಇದರಿಂದ ನನಗೆ ಬೇಸರವಾಗಿದೆ ಎಂದು ಅವರು, ವಸತಿ ಶಾಲೆಗಳ ಮಕ್ಕಳಿಗೆ ಕೋವಿಡ್ ಸುರಕ್ಷತೆಯೊಂದಿಗೆ ಕಲಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು.