ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕೋರಿ ಕೋರ್ಟ್ ಗೆ ನಟಿ ರಾಗಿಣಿ ಅರ್ಜಿ

Update: 2020-10-12 14:29 GMT

ಬೆಂಗಳೂರು, ಅ.12: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಅವರು ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂಬುದು ಸೇರಿ ಎನ್‍ಡಿಪಿಎಸ್ ವಿಶೇಷ ಕೋರ್ಟ್ ಗೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಸೋಮವಾರ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಕೋರ್ಟ್ ಗೆ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂಬುದು ಮೊದಲ ಮನವಿಯಾಗಿದೆ.

ರಾಗಿಣಿ ದ್ವಿವೇದಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ಆದರೆ, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮನವಿ ಮಾಡಲಾಗಿದೆ.

ಕುಟುಂಬದವರು, ವಕೀಲರ ಭೇಟಿಗೆ ಅವಕಾಶ ನೀಡುವಂತೆ ಮತ್ತೊಂದು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ರಾಗಿಣಿ ದ್ವಿವೇದಿ ಸೆ.14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಯಿ, ತಮ್ಮನ ಐಪಾಡ್, ಪೆನ್ ಡ್ರೈವ್ ವಾಪಸ್ ನೀಡುವಂತೆ 3ನೆ ಅರ್ಜಿಯಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರು ಮನವಿ ಮಾಡಿದ್ದಾರೆ. ಸಿಸಿಬಿ ಪೊಲೀಸರು ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿದಾಗ ಐಪಾಡ್, ಪೆನ್ ಡ್ರೈವ್ ವಶಕ್ಕೆ ಪಡೆದುಕೊಂಡಿದ್ದರು.

ಸೆ.28ರಂದು ರಾಗಿಣಿ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈಗ ಜಾಮೀನು ಪಡೆಯಲು ರಾಗಿಣಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಬೇಕಿದೆ.

ಎನ್‍ಡಿಪಿಎಸ್ ಕೋರ್ಟ್ ನಲ್ಲಿ ರಾಗಿಣಿ ಪರ ವಕೀಲರು ಸೆ.14ರಂದು ರಾಗಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆಗ ಕೋರ್ಟ್ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚನೆ ನೀಡಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಲು ನ್ಯಾಯಾಲಯ ಅನುಮತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News