ವಿಶ್ವವಿಖ್ಯಾತ ಮೈಸೂರು ದಸರಾ: ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರಿಗೆ ಅಧಿಕೃತ ಆಹ್ವಾನ

Update: 2020-10-16 16:21 GMT

ಬೆಂಗಳೂರು, ಅ.12: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಸೋಮವಾರ ನಗರದ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಸೇರಿದಂತೆ ಪ್ರಮುಖರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದರು.

ತದನಂತರ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ನಾಡಹಬ್ಬದಲ್ಲಿ ಪಾಲ್ಗೊಳ್ಳುವಂತೆ ಆತ್ಮೀಯವಾಗಿ ಸ್ವಾಗತ ಕೋರಿದರು. ಬಳಿಕ, ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯ ಕಚೇರಿಗೆ ತೆರಳಿದ ಮೈಸೂರು ದಸರಾ ಸ್ವಾಗತ ಸಮಿತಿ ಸದಸ್ಯರು, ಪ್ರಸ್ತುತ ಸಾಲಿನ ದಸರಾ ಉದ್ಘಾಟಿಸಲಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿ ಗೌರವಿಸಿದರು.

ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಸರಾ ಹಬ್ಬವನ್ನು ಸರಳವಾಗಿ ಅಂದರೆ ಸಂಪ್ರದಾಯಕ್ಕೆ ಅಡ್ಡಿಯಾಗದೆ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿ ಆಚರಿಸಲು ತೀರ್ಮಾನಿಸಿದೆ. ಅ.17ರಂದು ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಲಿದೆ.

‘ರಸ್ತೆಯಲ್ಲಿ ನಿಂತು ದಸರಾ ನೋಡಿದ್ದೆ'

ನಾನು ಓದಿದ್ದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ. ಪ್ರತಿ ಬಾರಿ ದಸರಾ ಸಂಭ್ರಮವನ್ನು ರಸ್ತೆಯಲ್ಲಿ ನಿಂತು ನೋಡುತ್ತಿದ್ದೆ. ಕಳೆದ 2 ವರ್ಷದ ಹಿಂದೆ ದಸರಾಗೆ ಹೋಗಿದ್ದೆ. ನನಗೆ ಜಂಬೂಸವಾರಿ, ಚಾಮುಂಡಿ ಬೆಟ್ಟ ನೋಡೋದು ತುಂಬಾ ಇಷ್ಟ. ಆದರೆ, ಈ ಬಾರಿ ನನಗೆ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಜೀವಮಾನದ ಸಂತಸವಾಗಿದೆ.

-ಡಾ.ಸಿ.ಎನ್.ಮಂಜುನಾಥ್

ಕಡ್ಡಾಯ ಕೋವಿಡ್ ಪರೀಕ್ಷೆ

ಸರಳ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಸ್ಥರಾಗಿರುವ ಈ ಸಮಿತಿಯ ಸರಳ ದಸರಾ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿದೆ. ಇನ್ನು, ಇದರಲ್ಲಿ ಪಾಲ್ಗೊಳ್ಳುವ 300 ಜನರನ್ನು ಅಲ್ಲಿಯ ಜಿಲ್ಲಾಧಿಕಾರಿ ಆಯ್ಕೆ ಮಾಡುತ್ತಾರೆ ಎಂದರು.

ಈ ಕೋವಿಡ್ ಹಿನ್ನೆಲೆ 6 ಜನ ವಾರಿಯರ್ಸ್ ಗೆ ಸನ್ಮಾನ ಮಾಡಲಾಗಿತ್ತು. ಈ ಪೈಕಿ ಒಬ್ಬರಿಂದ ಉದ್ಘಾಟನೆ ಮಾಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News