ಎದುರಾಳಿಯನ್ನು ಎಂದಿಗೂ ಪ್ರಬಲ ಎಂದೇ ಭಾವಿಸಬೇಕು: ಸಚಿವ ಬಿ.ಸಿ.ಪಾಟೀಲ್

Update: 2020-10-12 16:19 GMT

ಹಾವೇರಿ, ಅ.12: ಯುದ್ಧದಲ್ಲಿ ನಮ್ಮ ಎದುರಾಳಿ ಎಷ್ಟೇ ದುರ್ಬಲವಾಗಿದ್ದರೂ ಮೈಮರೆತು ಕೂರದೆ ಪ್ರಬಲವಾಗಿಯೆ ಇದ್ದಾನೆ ಎಂದು ಭಾವಿಸಿ ಕಣದಲ್ಲಿ ಹೋರಾಡಲೇಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ವಿಧಾನ ಪರಿಷತ್ತಿಗೆ ಅ.28ರಂದು ನಡೆಯಲಿರುವ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಎಸ್.ವಿ.ಸಂಕನೂರು ಸೋಮವಾರ ಹಿರೇಕೆರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರ ಕುರಿತು ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಪಶ್ಚಿಮ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿಯ 23 ಶಾಸಕರು, ಐವರು ಮಂತ್ರಿಗಳು, ನಾಲ್ವರು ಸಂಸದರಿದ್ದು ಪಶ್ಚಿಮ ಪದವೀಧರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ ಎಂದು ಅವರು ತಿಳಿಸಿದರು.

ಆದರೂ, ಎದುರಾಳಿಯನ್ನು ಹಗುರವಾಗಿ ಯಾರೂ ಪರಿಗಣಿಸದೆ, ಗೆಲುವು ಸುಲಭ ಎಂದು ಪರಿಗಣಿಸದೇ ಹೊಸ ಚುನಾವಣೆ ಎಂದು ಅಷ್ಟೇ ಹುಮ್ಮಸ್ಸಿನಿಂದ ಮನೆಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಬೇಕು. ಶಿಕ್ಷಣ ಸಂಸ್ಥೆಗಳ ಮುಖಂಡರು, ಶಿಕ್ಷಕರ ಸಂಘದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರು ದುಡಿಯಬೇಕು. ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಶಾಸಕರವರೆಗೆ ಎಲ್ಲರೂ ಅನುಭವಿಗಳೇ ಇರುವುದರಿಂದ ಈ ಚುನಾವಣೆಯನ್ನು ಗೆಲ್ಲಲೇಬೇಕು. ಸಂಕನೂರು ಅವರಿಗೆ ಕ್ಷೇತ್ರದಲ್ಲಿ ಜಯಗಳಿಸಲೇಬೇಕೆಂದು ಚುನಾವಣಾ ನೀತಿ ರೂಪಿಸಬೇಕು ಎಂದು ಅವರು ಕರೆ ನೀಡಿದರು.

ಈ ಚುನಾವಣೆ ಬಿಜೆಪಿಗೆ ಬಹಳ ಪ್ರತಿಷ್ಠೆಯ ಚುನಾವಣೆಯಾಗಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆಯಾದರೂ ವಿಧಾನಪರಿಷತ್ತಿನಲ್ಲಿ ಬಹುಮತವಿಲ್ಲ. ಮೇಲ್ಮನೆಯಲ್ಲಿಯೂ ಬಹುಮತ ಸಾಧಿಸಲು ಈ ನಾಲ್ಕು ಸ್ಥಾನಗಳ ವಿಧಾನ ಪರಿಷತ್ತಿನ ಚುನಾವಣೆ ಪಕ್ಷಕ್ಕೆ ಅತಿಮುಖ್ಯವಾಗಿದೆ. ಎರಡೂ ಸದನಗಳಲ್ಲಿ ಬಿಜೆಪಿಗೆ ಬಹುಮತವಿದ್ದರೆ ಕಾಯಿದೆಗಳನ್ನು ಕಾನೂನುಗಳನ್ನು ಬಿಲ್ಲುಗಳನ್ನು ಸುಲಭವಾಗಿ ಪಾಸ್ ಮಾಡಬಹುದಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ತಾಲೂಕಿನಲ್ಲಿ 4200ಕ್ಕೂ ಹೆಚ್ಚುಮತಗಳು ಈ ಪಶ್ಚಿಮ ಪದವೀಧರ ಕ್ಷೇತ್ರಕ್ಕಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ಕ್ಷೇತ್ರದ ಮುಖಂಡರು ಮತಗಳನ್ನು ಹಂಚಿಕೊಂಡು ಮನೆಮನೆಗೆ ಭೇಟಿ ನೀಡಿ ಮತಯಾಚಿಸಬೇಕು ಎಂದು ಅವರು ಸಲಹೆ ಹೇಳಿದರು.

ಅ.18ರಂದು ಹಿರೇಕೆರೂರು ತಾಲೂಕಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್ ಭೇಟಿಗೂ ಮುನ್ನ ಪಕ್ಷ ಸಂಘಟನೆಗೆ ಒತ್ತು ನೀಡಲು ಈ ಪೂರ್ವಭಾವಿ ಸಭೆ ನಡೆಸಲಾಗಿದೆ. ಕ್ಷೇತ್ರದಲ್ಲಿ ಸಂಘಟಿತ ಉತ್ಸಾಹಿ ಬಿಜೆಪಿಯ ಕಾರ್ಯಕರ್ತರ ಪಡೆಯೇ ಇದೆ. ಎಲ್ಲರೂ ಸಂಕನೂರರ ಗೆಲುವಿಗಾಗಿ ಶ್ರಮಿಸಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.

ಅಭ್ಯರ್ಥಿ ಎಸ್.ವಿ.ಸಂಕನೂರು ಮಾತನಾಡಿ, ಹಿರೇಕೆರೂರಿನಲ್ಲಿ ಬಿಜೆಪಿಯ ಸಾಹಸಿ ಕಾರ್ಯಪಡೆಯೇ ಇದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ತಮ್ಮ ಗೆಲುವಿಗೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಶ್ರಮಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ್,ಪಟ್ಟಣ ಪಂಚಾಯಿತಿ ಸದಸ್ಯರಾದ ಗುರುಶಾಂತ ಎತ್ತಿನಹಳ್ಳಿ, ಮಹೇಂದ್ರ ಬಡಳ್ಳಿ, ಶಕ್ತಿಕೇಂದ್ರದ ಪ್ರಮುಖರು ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News