×
Ad

ಅನುಮೋದನೆಯಿಲ್ಲದೆ ಕೃಷಿ ಜಮೀನು ರಸ್ತೆಗೆ ಬಳಸುವಂತಿಲ್ಲ: ನಗರಾಭಿವೃದ್ಧಿ ಇಲಾಖೆ ಸುತ್ತೋಲೆ

Update: 2020-10-12 23:49 IST

ಬೆಂಗಳೂರು, ಅ.12: ಭೂ ಪರಿವರ್ತನೆ ವಿನ್ಯಾಸದ ಅನುಮೋದನೆಯಿಲ್ಲದೆ ಕೃಷಿ ಜಮೀನನ್ನು ರಸ್ತೆಗಾಗಿ ರೈತರಿಂದ ಪರಿತ್ಯಾಜನ ಪತ್ರವನ್ನು ಸ್ಥಳೀಯ ಸಂಸ್ಥೆಗಳು ಪಡೆಯುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದರಿಂದ ಬಡವರು, ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ರೆವಿನ್ಯೂ ಲೇಔಟ್‌ಗಳಿಗೆ ಸಂಕಷ್ಟ ಎದುರಾಗಲಿದೆ. ಹೊಸ ಬಡಾವಣೆ ನಿರ್ಮಾಣದ ವೇಳೆ ರಸ್ತೆಯಿಲ್ಲದಿದ್ದಲ್ಲಿ ರಸ್ತೆಗೆ ಅಗತ್ಯವಿರುವ ಭೂಮಿಯನ್ನು ಭೂ ಮಾಲಕರಿಂದ ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಜನ ಪತ್ರನೋಂದಣಿ ಮಾಡಿಸುತ್ತಿದ್ದರು. ಅಲ್ಲಿಗೆ ಭೂಮಾಲಕ ರಸ್ತೆಗೆಂದು ಪರಿತ್ಯಾಜನ ಪತ್ರ ಮಾಡಿಸಿಕೊಟ್ಟ ವೇಳೆ ಅದನ್ನೇ ಆಧಾರವಾಗಿಟ್ಟುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ರಸ್ತೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಹೊಸ ಸುತ್ತೋಲೆ ಪ್ರಕಾರ ಪತ್ರ ಪಡೆಯುವ ಮೊದಲು ಮಾರ್ಗಸೂಚಿ ಪಾಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧವಾದ ಕೃಷಿ ಭೂಮಿ ಪಡೆಯುವಾಗ ಭೂ ಪರಿವರ್ತನೆ ವಿನ್ಯಾಸ ಅನುಮೋದನೆ ಪಡೆಯಬೇಕು. ನೇರವಾಗಿ ಸ್ಥಳೀಯ ಸಂಸ್ಥೆಗಳು ರಸ್ತೆಗೆಂದೇ ಪಡೆಯುವಂತಿಲ್ಲ. ಅನಿವಾರ್ಯ ಸಂದರ್ಭ ಬಂದಲ್ಲಿ ನರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳು, ಸಹಾಯಕ ನಿರ್ದೇಶಕರಿಂದ ತಾಂತ್ರಿಕ ಅಭಿಪ್ರಾಯ ಪಡೆಯಬೇಕು. ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿದ ನಂತರ ಸ್ಥಳೀಯ ಸಂಸ್ಥೆಗಳು ಹಸ್ತಾಂತರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸ್ಥಳೀಯ ಸಂಸ್ಥೆಗಳು ವ್ಯವಸಾಯ ಭೂಮಿಯನ್ನು ರಸ್ತೆಯೆಂದು ಭೂಮಾಲಕರಿಂದ ಪರಿತ್ಯಾಜನ ಪತ್ರದ ಮೂಲಕ ನೀಡಿದ್ದಲ್ಲಿ ಅಂತಹ ಜಾಗಗಳನ್ನು ಪಡೆಯಬಾರದು ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎನ್.ಶಿವಕುಮಾರಸ್ವಾಮಿ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News